×
Ad

ಸಿಂಧನೂರು | ಮಹಾರಾಷ್ಟ್ರದಲ್ಲಿ ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣ: ಸೂಕ್ತ ತನಿಖೆಗೆ ಕುಟುಂಬಸ್ಥರ ಆಗ್ರಹ

Update: 2026-03-08 19:48 IST

ಸಿಂಧನೂರು: ಮಹಾರಾಷ್ಟ್ರದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಬಂಗಾಲಿ ಕ್ಯಾಂಪಿನ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಮೃತನ ಸಹೋದರ ರಾಹುಲ್ ಸಿಗ್ದಾರ್, ದೀಪಾಂಕರ್ ಎಂಬ ವ್ಯಕ್ತಿಯ ಜೊತೆಗೆ ತಮ್ಮ ಸಹೋದರ ಅಂಗೋತ್ ಸಿಗ್ದಾರ್ ಕೆಲಸದ ನಿಮಿತ್ತ ಮಹಾರಾಷ್ಟ್ರಕ್ಕೆ ತೆರಳಿದ್ದನು. ಬಳಿಕ ಆತನ ಸಾವಿನ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಪರಿಶೀಲಿಸಿದಾಗ ಮೈಮೇಲೆ ಗಂಭೀರ ಪೆಟ್ಟುಗಳ ಗುರುತುಗಳು ಕಂಡುಬಂದಿದ್ದು, ಕೊಲೆಯಾದ ರೀತಿಯಲ್ಲಿ ಮೃತದೇಹ ಕಂಡುಬಂದಿತ್ತು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ಕೊಲೆ ಸಂಬಂಧ ದೂರು ದಾಖಲಿಸಿದ್ದೇವೆ. ಆದರೆ ಪೊಲೀಸರು ಈವರೆಗೆ ಸಮರ್ಪಕ ತನಿಖೆ ನಡೆಸದೇ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲಿನ ಪೊಲೀಸರಿಂದ ನ್ಯಾಯ ದೊರೆಯದ ಹಿನ್ನೆಲೆಯಲ್ಲಿ ಸಿಂಧನೂರಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೇವೆ. ಇಲ್ಲಿನ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ಮೃತನ ಪತ್ನಿ ಪುಲ್ಮತಿ ಸಿಗ್ದಾರ್ ಸೇರಿದಂತೆ ಕುಟುಂಬಸ್ಥರು ತಮ್ಮ ಅಳಲನ್ನು ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಘಟಚಿಲೋರಿಯ ಅರಮೂರಿ ಪ್ರದೇಶದಲ್ಲಿ ನಡೆದ ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇದೀಗ ಮೃತನ ಪತ್ನಿ ಪುಲ್ಮತಿ ಸಿಗ್ದಾರ್ ಸಿಂಧನೂರು ಗ್ರಾಮೀಣ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದಾರೆ. ಅವರ ದೂರನ್ನು ದಾಖಲಿಸಿಕೊಂಡು ಸಂಬಂಧಿತ ಮಹಾರಾಷ್ಟ್ರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುವುದು ಎಂದು ಸಿಂಧನೂರು ಉಪವಿಭಾಗದ ಡಿವೈಎಸ್‌ಪಿ ಜಿ.ಚಂದ್ರಶೇಖರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News