ರಾಯಚೂರು | ನರೇಗಾದಡಿ ಕೆಲಸ ನೀಡದ ಆರೋಪ : ಗ್ರಾಕೂಸ್ ಸಂಘಟನೆಯಿಂದ ಪ್ರತಿಭಟನೆ
ರಾಯಚೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಎಂಎನ್‌ಆರ್‌ಇಜಿಎ) ಕೂಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಗ್ರಾಮೀಣ ಭಾಗದ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ (ಗ್ರಾಕೂಸ್) ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕೂಲಿಕಾರರು ಧರಣಿ ನಡೆಸಿದರು.
ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುವುದೇ ಇಲ್ಲ ಎಂದು ಅವರು ಆರೋಪಿಸಿದರು. ಜೊತೆಗೆ 15 ದಿನಗಳಾದರೂ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಕೆಲಸ ನೀಡಲಾಗುತ್ತಿಲ್ಲ ಎಂದು ದೂರಿದರು.
ಜಿಲ್ಲಾ ಪಂಚಾಯಿತಿಯಿಂದ ಸೂಚನೆ ಬಂದಿದೆ ಎಂದು ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದು, ಕೇಂದ್ರ ಸರ್ಕಾರ 10 ಕಾಮಗಾರಿಗಳು ಬಾಕಿ ಇದ್ದರೆ ಹೊಸ ಕಾಮಗಾರಿಗಳನ್ನು ಅನುಮೋದಿಸಲು ಸಾಧ್ಯವಿಲ್ಲ ಎಂಬ ಆದೇಶವನ್ನು ಹೊರಡಿಸಿದೆ ಎಂದು ಹೇಳಿ ಕಾರ್ಮಿಕರಿಗೆ ಕೆಲಸ ನೀಡದೇ ವಂಚಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೇಂದ್ರ ಸರ್ಕಾರ ಕಾರ್ಮಿಕರ ಖಾತೆಗೆ 7 ದಿನಗಳೊಳಗೆ ಕೂಲಿ ಹಣ ಪಾವತಿಸಲಾಗುವುದು ಎಂದು ಘೋಷಿಸಿದ್ದರೂ, ವಾಸ್ತವದಲ್ಲಿ ಅದು ಜಾರಿಯಾಗುತ್ತಿಲ್ಲ. ಇದರಿಂದ ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೆಲಸ ನೀಡದಿದ್ದಲ್ಲಿ ಕಾನೂನಿನ ಪ್ರಕಾರ ನಿರುದ್ಯೋಗ ಭತ್ಯೆ ನೀಡುವ ಅವಕಾಶವಿದ್ದರೂ ಪಂಚಾಯತ್ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ವಿಷಯದಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಕೆಲಸ ಮಾಡದ ಕಾರ್ಮಿಕರ ಹೆಸರಿನಲ್ಲಿ ಹಣ ಪಾವತಿಸಿರುವ ಘಟನೆಗಳೂ ನಡೆದಿರುವುದು ವಿಷಾದನೀಯ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಹುಚ್ಚಪ್ಪ, ಮಾರೆಮ್ಮ, ಆಂಜನೇಯ್ಯ, ಬಸವರಾಜ, ಹನುಮಂತಮ್ಮ, ಬಾಬು, ಪದ್ಮಮ್ಮ, ಈರಮ್ಮ, ಗುಂಡಪ್ಪ, ಬಸವರಾಜ, ಶರಣಮ್ಮ, ಯಲ್ಲಮ್ಮ, ಕೃಷ್ಣಮ್ಮ, ಇಂದ್ರಮ್ಮ, ಬಾಬಮ್ಮ ಸೇರಿ ಅನೇಕರಿದ್ದರು.