ರಾಯಚೂರು | ವಿಜ್ಞಾನ ಸಮಾಜದ ಅಭಿವೃದ್ಧಿಗೆ ದಾರಿ ತೋರಿಸುವ ಶಕ್ತಿ: ಡಾ.ವಿಜಯಕುಮಾರ ಪಲ್ಲೇದ್
ರಾಯಚೂರು: ವಿಜ್ಞಾನವು ಕೇವಲ ಪಠ್ಯಪುಸ್ತಕಗಳಲ್ಲಿ ಇರುವ ವಿಷಯವಲ್ಲ; ಅದು ಸಮಾಜದ ಅಭಿವೃದ್ಧಿಗೆ ದಾರಿ ತೋರಿಸುವ ಶಕ್ತಿಯಾಗಿದೆ. ಪ್ರಶ್ನಿಸುವ ಮನಸ್ಸು ಮತ್ತು ಹೊಸದನ್ನು ತಿಳಿಯುವ ಕುತೂಹಲವೇ ವಿಜ್ಞಾನದ ಮೂಲ ಎಂದು ಡಾ.ವಿಜಯಕುಮಾರ ಪಲ್ಲೇದ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು. ವೈಫಲ್ಯಗಳಿಗೆ ಹೆದರದೆ ಹೊಸ ಪ್ರಯೋಗಗಳನ್ನು ಕೈಗೊಳ್ಳಬೇಕು. ವಿಜ್ಞಾನವನ್ನು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧನವಾಗಿಸಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, “ನಿಮ್ಮ ಕನಸು ದೊಡ್ಡದಾಗಿರಲಿ, ಪರಿಶ್ರಮ ನಿರಂತರವಾಗಿರಲಿ; ಇಂದಿನ ವಿದ್ಯಾರ್ಥಿಗಳೇ ನಾಳೆಯ ವಿಜ್ಞಾನಿಗಳು ಹಾಗೂ ದೇಶದ ನಿರ್ಮಾತೃಗಳು” ಎಂದು ಪ್ರೇರಣೆ ನೀಡಿದರು.
ಪ್ರಾಚಾರ್ಯ ಡಾ. ಪ್ರಾಣೇಶ್ ಕುಲಕರ್ಣಿ ಮಾತನಾಡಿ, ವಿಜ್ಞಾನ ಶಿಕ್ಷಣವು ರಾಷ್ಟ್ರದ ಅಭಿವೃದ್ಧಿಗೆ ಮೂಲಸ್ತಂಭವಾಗಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಮತ್ತು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ವರ್ಷದ ವಿಷಯ “ವಿಜ್ಞಾನದಲ್ಲಿ ಮಹಿಳೆಯರು: ವಿಕಸಿತ ಭಾರತಕ್ಕೆ ಚಾಲನೆ” ಆಗಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ, ಸಂಶೋಧನಾ ಮನೋಭಾವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಆಮ್ಲ–ಕ್ಷಾರ ಟೈಟ್ರೇಶನ್, ಕೆಮಿಕಲ್ ಕ್ಯಾಮಿಲಿಯನ್ ಮತ್ತು ಫೇಕ್ ಬ್ಲಡ್ ಪ್ರಯೋಗಗಳನ್ನು ಪ್ರದರ್ಶಿಸಿದರು. ಚರ್ಚಾ ಸ್ಪರ್ಧೆಯಲ್ಲಿ “ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ: ಅಧ್ಯಯನಕ್ಕೆ ಉತ್ತೇಜನವೇ ಅಥವಾ ಅವಲಂಬನೆಯೇ?” ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಅಲ್ಫಿಯಾ ಮತ್ತು ಪ್ರಸನ್ನ ಪ್ರಥಮ ಬಹುಮಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಗಂಗಾ ಶಿರಿ ಸ್ವಾಗತಿಸಿದರು. ಡಾ. ಚಂದ್ರಶೇಖರ್ ಸಜ್ಜನ್ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಸೋಮನಾಥ ರೆಡ್ಡಿ ಸಿ. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯುಎಸಿ ಸಂಯೋಜಕ ಡಾ. ಮಹಾಂತೇಶ್ ಅಂಗಡಿ, ಡಾ. ಶಿಲ್ಪಕಲಾ, ನಿಹಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.