ಸಿಂಧನೂರು | ದೇಶದ ಏಕತೆ ಕಾಪಾಡಲು ಎಲ್ಲ ಧರ್ಮೀಯರು ಒಗ್ಗಟ್ಟಾಗಬೇಕು: ಸಲೀಂ ಅಹ್ಮದ್
ಸೌಹಾರ್ದ ಇಫ್ತಾರ್ ಕೂಟ
ಸಿಂಧನೂರು: ಭಾರತ ದೇಶವು ಸರ್ವ ಜನಾಂಗಗಳ ಶಾಂತಿಯ ತೋಟವಾಗಿದ್ದು, ಹಿಂದೂ–ಮುಸ್ಲಿಂ ಬಾಂಧವರು ಹಾಲು–ಜೇನಿನಂತೆ ಒಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಶಕ್ತಿಗಳನ್ನು ಮಣಿಸಿ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು.
ನಗರದ ಮಿಲಾಪ್ ಶಾದಿ ಮಹಲ್‌ನಲ್ಲಿ ಗಿರಾಮಿಪಾಷಾ ಜಾಗೀರ್‌ದಾರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.
ಭಾರತದ ಇತಿಹಾಸದಲ್ಲಿ ಎಲ್ಲಾ ಧರ್ಮೀಯರು ಸಹೋದರರಂತೆ ಬದುಕಿ ಕೋಮು ಸಾಮರಸ್ಯ ಕಾಪಾಡಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಕೆಲವು ದುಷ್ಟ ಶಕ್ತಿಗಳು ಸಮಾಜದಲ್ಲಿ ಬಿರುಕು ಮೂಡಿಸಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿವೆ. ಅಂತಹ ಶಕ್ತಿಗಳ ವಿರುದ್ಧ ಎಲ್ಲ ಧರ್ಮೀಯರು ಒಗ್ಗಟ್ಟಾಗಿ ಹೋರಾಡಬೇಕು. ದೇಶದ ವಿಚಾರ ಬಂದಾಗ ಎಲ್ಲರೂ ಒಂದಾಗಿ ದೇಶ ಕಟ್ಟಿದಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಉಳಿಯುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಸಮುದಾಯದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಬೇಕು. ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಂಡು ಮುಂದುವರಿಯಬೇಕು. ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ 4,000 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಗಿರಾಮಿಪಾಷಾ ಜಾಗೀರ್‌ದಾರ್ ಅವರು ಈ ಭಾಗದಲ್ಲಿ ಸಾಕಷ್ಟು ಜನಸೇವೆ ಮಾಡಿದ್ದು, ಅವರ ಹೆಸರಿನಲ್ಲಿ ಟ್ರಸ್ಟ್ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಅವರು, ರಮಝಾನ್ ಮಾಸದ ಹಿನ್ನೆಲೆ ದೇಶಾದ್ಯಂತ ಮುಸ್ಲಿಂ ಬಾಂಧವರು ಕಟ್ಟುನಿಟ್ಟಿನ ವ್ರತ ಉಪವಾಸ ಆಚರಿಸುತ್ತಿರುವುದು ಶ್ರೇಷ್ಠವಾಗಿದೆ. ಮೌಲ್ಯಾಧಾರಿತ ಜೀವನ ನಡೆಸಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ಹಬ್ಬಗಳ ಆಚರಣೆ ಮಹತ್ವದ್ದಾಗಿದೆ ಎಂದು ಹೇಳಿದರು.
ಎಲ್ಲ ಧರ್ಮೀಯ ಯುವಪೀಳಿಗೆ ಧರ್ಮದ ಉದ್ದೇಶಗಳನ್ನು ಅರಿತು ಸದೃಢ ಹಾಗೂ ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಗಿರಾಮಿಪಾಷಾ ಜಾಗೀರ್‌ದಾರ್ ಟ್ರಸ್ಟ್‌ನ ಮುಖ್ಯಸ್ಥ ಸೈಯದ್ ಹಾರೂನ್ ಪಾಷಾ ಜಾಗೀರ್‌ದಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ರೌಡಕುಂದಾ ಬಂಗಾರಿಕ್ಯಾಂಪಿನ ಸದಾನಂದ ಶರಣರು ಸಾನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ನೀಲಂಗ ಶರೀಫ್‌ನ ಸೈಯದ್ ಹೈದರ್ ಅಲಿ ಹುಸೇನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖಂಡರಾದ ಸಜ್ಜಾದ್ ಹುಸೇನಿ ಮಾನ್ವಿ, ಸೈಯದ್ ಬಾಬರ್ ಪಾಷಾ ಜಾಗೀರ್ ದಾರ್, ಮೆಹಬೂಬ್ ಪೀರ್ ಖಾದ್ರಿ, ಸಂಜಯ್ ಪಾಟೀಲ್, ರಜಾಕ್ ಉಸ್ತಾದ್, ಅಸ್ಲಂಪಾಷಾ ರಾಯಚೂರು, ಅಶೋಕ ಉಮಲೂಟಿ, ಮೆಹಬೂಬ್ ಮುಲ್ಲಾ, ಮೌಲಾನಾಗಳಾದ ಮೆಹರಾಜ್ ಖಾದ್ರಿ, ತಾಜುಮುದ್ದೀನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.