×
Ad

ರಾಯಚೂರು | ತುಂಗಭದ್ರಾ ಕಾರ್ಮಿಕರ ಸಂಘದಿಂದ ಬೃಹತ್ ರ‍್ಯಾಲಿ

Update: 2026-03-08 23:15 IST

ರಾಯಚೂರು: ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ವತಿಯಿಂದ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಿಂದ ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ರ್ಯಾಲಿ ನಡೆಸಲಾಯಿತು.

ರ್ಯಾಲಿಯ ನಂತರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗುವ ಮೂಲಕ ಸಮಾವೇಶವನ್ನು ಮುಕ್ತಾಯಗೊಳಿಸಲಾಯಿತು.

ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕಾರ್ಮಿಕ ಸಚಿವರು ಹಾಗೂ ಹಿರಿಯ ಕಾರ್ಮಿಕ ನಾಯಕ ಎಸ್.ಕೆ. ಕಾಂತವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಸಂಘಗಳ ಮಂಡಳಿ (ಎಐಸಿಸಿಟಿಯು) ರಾಷ್ಟ್ರೀಯ ಪ್ರಧಾನ ಕಾರ್ಯ ಉಪಾಧ್ಯಕ್ಷ ಲಿಪ್ಟನ್ ಡಿ ರಿಜೋರಿಯೋ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರಿ ಕೃಷ್ಣನ್, ನಾಗರಾಜ್ ಪೂಜಾರ್, ಅಜೀಜ್ ಜಾಗೀರ್ದಾರ್, ಎಂ. ಬಸವರಾಜ್, ಸಿದ್ದಪ್ಪಗೌಡ ಯರಮರಸ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದಕ್ಕೂ ಮೊದಲು ನಡೆದ ಸಮಾವೇಶದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರನ್ನು ಖಾಯಂ ಕೆಲಸಗಾರರೆಂದು ಪರಿಗಣಿಸಿ ನಿರಂತರವಾಗಿ ಕೆಲಸದಲ್ಲಿ ಮುಂದುವರಿಸಬೇಕು ಹಾಗೂ ಉದ್ಯೋಗ ಭದ್ರತೆ ನೀಡಬೇಕು ಎಂದು ಆಗ್ರಹಿಸಲಾಯಿತು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ವೇತನ, ಇಪಿಎಫ್ ಹಾಗೂ ಇಎಸ್ಐ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಕಾಯ್ದೆಗಳ ಅನ್ವಯ ಕೆಲಸದ ಸಮಯ ನಿಗದಿಪಡಿಸಿ, ಸಮವಸ್ತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಈ ನೀರಾವರಿ ಯೋಜನೆಯಲ್ಲಿ ಉದ್ಯೋಗ ಸೃಷ್ಟಿಸಲು ಭಾರತದ ಸಂವಿಧಾನದ 371(J) ವಿಧಿ ಅನ್ನು ನೀರಾವರಿ ಕಾರ್ಮಿಕರಿಗೆ ಅನ್ವಯಿಸಿ ಉದ್ಯೋಗ ಭದ್ರತೆ ನೀಡಲು ಸರ್ಕಾರ ಹಾಗೂ ನಿಗಮ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಪತ್ರವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News