ಲಿಂಗಸುಗೂರು | ನಿರ್ಮಾಣ ಹಂತದ ಕಟ್ಟಡದ ಮೆಟ್ಟಿಲು ಕುಸಿದು ದಂಪತಿ ಮೃತ್ಯು
ಸಾಂದರ್ಭಿಕ ಚಿತ್ರ | PC : GROK
ಲಿಂಗಸುಗೂರು: ನಿರ್ಮಾಣ ಹಂತದ ಕಟ್ಟಡದ ಮೆಟ್ಟಿಲು ಕುಸಿದು ದಂಪತಿಗಳಿಬ್ಬರು ಮೃತಪಟ್ಟ ಘಟನೆ ತಾಲೂಕಿನ ಯಲಗಟ್ಟಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ದ್ಯಾವಪ್ಪ ಸೂಗುರು (38) ಹಾಗೂ ಪತ್ನಿ ಶಿವಮ್ಮ (32) ಎಂದು ಗುರುತಿಸಲಾಗಿದೆ.
ಯಲಗಟ್ಟಾ ಗ್ರಾಮದ ಮನೆಯೊಂದರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದರಲ್ಲಿ ಮೆಟ್ಟಿಲು ನಿರ್ಮಾಣ ಮಾಡಲಾಗಿತ್ತು. ದ್ಯಾವಪ್ಪ ಮತ್ತು ಶಿವಮ್ಮ ದಂಪತಿಗಳು ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಮೆಟ್ಟಿಲು ಕುಸಿದು ಬಿದ್ದಿದೆ. ಮೆಟ್ಟಿಲು ನೇರವಾಗಿ ಅವರ ಮೇಲೆ ಬಿದ್ದ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯರ ಪ್ರಕಾರ, ಮೆಟ್ಟಿಲುಗಳನ್ನು ಪಿಲ್ಲರ್‌ಗಳಿಲ್ಲದೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಈ ದುರ್ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಹಟ್ಟಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ನಂತರ ಮೃತ ದೇಹಗಳನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.