ದಲಿತ ಮಹಿಳೆಯರ ಬಗ್ಗೆ ಹೇಳಿಕೆ ನೀಡಿದ ಯತ್ನಾಳ್ ಕ್ಷಮೆಯಾಚಿಸಬೇಕು : ಆರ್‌ಸಿಎಫ್ ಆಗ್ರಹ
ರಾಯಚೂರು: ದಸರಾ ಹಬ್ಬದಂದು ಚಾಮುಂಡೇಶ್ವರಿಗೆ ಕೇವಲ ಸನಾತನ ಧರ್ಮದವರೇ ಹೂ ಹಾಕಬೇಕು, ಸಾಮಾನ್ಯ ದಲಿತ ಮಹಿಳೆಗೆ ಸಹ ಅದಕ್ಕೆ ಹಕ್ಕಿಲ್ಲ ಎಂದು ಹೇಳಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜಾತಿವಾದಿ, ಸಂವಿಧಾನ ವಿರೋಧಿ ಹಾಗೂ ಜನವಿರೋಧಿ ಮನೋಭಾವವನ್ನು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ (RCF) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಆರ್‌ಸಿಎಫ್ ರಾಜ್ಯ ಮುಖಂಡ, ಹೋರಾಟಗಾರ ಕಾಮ್ರೇಡ್ ಎಂ.ಗಂಗಾಧರ್ ಮತ್ತು ಜನಪರ ಕವಿ-ಚಿಂತಕ ಪ್ರಶಾಂತ್ ದಾನಪ್ಪ ಮಸ್ಕಿ ಅವರು ನೀಡಿದ ಪ್ರಕಟಣೆಯಲ್ಲಿ, ಯತ್ನಾಳ್ ತಕ್ಷಣವೇ ಬಹಿರಂಗ ಕ್ಷಮೆಯಾಚನೆ ಮಾಡಬೇಕು ಹಾಗೂ ಮನುಷ್ಯತ್ವ ಕಲಿಯಲು ಕೆಲವು ವರ್ಷಗಳ ಕಾಲ ಸಾರ್ವಜನಿಕ ಜೀವನದಿಂದ ದೂರವಿರಬೇಕು ಎಂದು ಒತ್ತಾಯಿಸಿದ್ದಾರೆ.
ಇಂತಹ ಮನೋಭಾವ ಹೊಂದಿರುವವರು ʼಹಿಂದೂ ನಾವೆಲ್ಲಾ ಒಂದು’ ಎಂದು ಭಾಷಣ, ನಾಟಕ ಮಾಡಿ ಜನರನ್ನು ಮೋಸಮಾಡುತ್ತಿದ್ದಾರೆ. ಆದರೆ, ಪ್ರಾಯೋಗಿಕವಾಗಿ ಸಮಾಜದಲ್ಲಿ ಜಾತಿ ವೈಷಮ್ಯವನ್ನು ಬಿತ್ತುತ್ತಿದ್ದಾರೆ. ಸಮಾನತೆಯ ಸಂವಿಧಾನದ ಆಶ್ರಯದಲ್ಲಿ ವಿಧಾನಸೌಧ, ಸಂಸತ್ತಿಗೆ ಹೋಗುವ ಇವರು, ಗೆದ್ದ ನಂತರ ವಿಷಕಾರ್ತಿದ್ದಾರೆ. ಇದು ಕಾರ್ಮಿಕ ವರ್ಗದ ಸಾಮರಸ್ಯದ ಬದುಕಿಗೆ ಧಕ್ಕೆಯಾಗಿದೆ. ಬಸವಣ್ಣನವರ ಕನಸಾದ ಕಲ್ಯಾಣ ಕರ್ನಾಟಕದ ಆಶಯಕ್ಕೂ ಇದು ಮಾರಕವಾಗಿದೆ ಎಂದಿದ್ದಾರೆ.
ಬಸವಣ್ಣ, ಬುದ್ಧ, ಕನಕದಾಸ, ಪೆರಿಯಾರ್, ಅಂಬೇಡ್ಕರ್, ನಾರಾಯಣ ಗುರು, ಕುಡ್ಮಲ್ ರಂಗರಾವ್, ಬಿರ್ಸಾ ಮುಂಡಾ ಅವರ ಉಪದೇಶಗಳು ಸಮಾಜಕ್ಕೆ ಶಕ್ತಿದಾಯಕವಾಗಿರಬೇಕು. ಆದರೆ ಯತ್ನಾಳ್ ಅವರಂತಹವರ ಮಾತುಗಳಿಂದ ವಿಷ ಹರಡುತ್ತವೆ. ಆದ್ದರಿಂದ ಅವರು ತಕ್ಷಣವೇ ಕ್ಷಮೆಯಾಚಿಸಲೇಬೇಕು ಎಂದು ಆಗ್ರಹಿಸಿದರು.