ಇನ್ನು ರೈಲ್ವೆ ವೈಟಿಂಗ್ ಲಿಸ್ಟ್ ಗೆ ಒಟ್ಟು ಸಾಮರ್ಥ್ಯದ ಶೇಕಡ 25ರ ಮಿತಿ
ಸಾಂದರ್ಭಿಕ ಚಿತ್ರ PC: PTI
ಹೊಸದಿಲ್ಲಿ: ರೈಲ್ವೆ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿರುವ ಭಾರತೀಯ ರೈಲ್ವೆ, ರೈಲಿನ ಒಟ್ಟು ಪ್ರಯಾಣಿಕ ಸಾಮರ್ಥ್ಯದ ಶೇಕಡ 25ರಷ್ಟು ಮಾತ್ರ ವೈಟ್ ಲಿಸ್ಟ್ ಟಿಕೆಟ್ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಇದು ಎಸಿ1, 2 ಮತ್ತು 3, ಸ್ಲೀಪರ್ ಹಾಗೂ ಚೇರ್‌ಕಾರ್ ಎಲ್ಲ ವರ್ಗಕ್ಕೂ ಅನ್ವಯಿಸಲಿದೆ. ಅಂಗವಿಲಕರ ಕೋಟಾದಂಥ ಕೋಟಾಗಳನ್ನು ಪರಿಗಣಿಸಿ ಉಳಿಕೆ ಸೀಟುಗಳ ಶೇಕಡ 25ರಷ್ಟು ಮಾತ್ರ ವೈಟಿಂಗ್ ಲಿಸ್ಟ್ ಟಿಕೆಟ್ ಮಾರಾಟ ಮಾಡಲಾಗುತ್ತದೆ.
ಈ ಹೊಸ ನಿರ್ಧಾರದಿಂದ ದೃಢೀಕರಣಗೊಳ್ಳದ ಟಿಕೆಟ್ ಪ್ರಯಾಣಿಕರ ಪ್ರಯಾಣದ ಅನಿಶ್ಚಿತತೆಯನ್ನು ಕಡಿಮೆ ಮಾಡಲಿದೆ ಎಂದು ರೈಲ್ವೆ ಪ್ರಕಟಣೆ ಹೇಳಿದೆ. ಬಹುತೇಕ ಪ್ರಕರಣಗಳಲ್ಲಿ ಶೇಕಡ 20 ರಿಂದ 25ರಷ್ಟು ವೈಟಿಂಗ್ ಲಿಸ್ಟ್ ಟಿಕೆಟ್ ಗಳು ಪ್ರಯಾಣಿಕರ ಅಂತಿಮ ಚಾರ್ಟ್ ಸಿದ್ಧಪಡಿಸುವ ಸಮಯಕ್ಕೆ ದೃಢಪಡುತ್ತವೆ. ಈ ಕಾರಣದಿಂದ ಹೊಸ ಮಿತಿ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಮಂಡಳಿ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು ವಿಭಾಗೀಯ ರೈಲ್ವೆಗಳು ತಕ್ಷಣದಿಂದ ಇದನ್ನು ಅನುಷ್ಠಾನಗೊಳಿಸುತ್ತಿವೆ.
ಟಿಕೆಟ್ ಬುಕ್ಕಿಂಗ್ ಮಾಡಿದ ಹಲವು ಮಂದಿ ಪ್ರಯಾಣಿಕರು ಪ್ರಯಾಣದ ಅನಿಶ್ಚಿತತೆ ಕಾರಣದಿಂದ ಕಾಯ್ದಿರಿಸಿದ ಬೋಗಿಗಳಿಗೆ ನುಗ್ಗುವುದರಿಂದ ರೈಲುಗಳಲ್ಲಿ ದಟ್ಟಣೆ ಅಧಿಕವಾಗುತ್ತದೆ. ಇದನ್ನು ತಡೆಯಲು ಕೂಡಾ ಹೊಸ ನಿರ್ಧಾರ ನೆರವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. 2013ರ ಜನವರಿಯಲ್ಲಿ ಹೊರಡಿಸಿದ ಸುತ್ತೋಲೆಗೆ ಅನುಗುಣವಾಗಿ ಇದುವರೆಗೆ ಎಸಿ1 ಕೋಚ್ ನಲ್ಲಿ 30 ಬರ್ತ್ ಗಳು, ಎಸಿ2 ಕೋಚ್ ನಲ್ಲಿ 100, ಎಸಿ3 ಕೋಚ್ ನಲ್ಲಿ 300 ಹಾಗೂ ಸ್ಪೀಪರ್ನಲ್ಲಿ 400 ಬರ್ತ್ ಳಿಗೆ ವೈಟ್ ಲಿಸ್ಟ್ ಟಿಕೆಟ್ ನೀಡಲಾಗುತ್ತಿತ್ತು.
"ಇದೀಗ ಬೇರೆ ಬೇರೆ ರೈಲ್ವೆ ವಲಯಗಳು ಆಯಾ ವಲಯಗಳಲ್ಲಿ ಆಗುವ ಬುಕ್ಕಿಂಗ್ ಮತ್ತು ರದ್ದತಿ ವಿಧಾನ ಪರಿಗಣಿಸಿ ಗರಿಷ್ಠ ಮಿತಿ ನಿಗದಿಪಡಿಸಲಿವೆ" ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.