ಮಳೆ ಆವಾಂತರ: ಭೂಕುಸಿದಿಂದ ಉತ್ತರಾಖಂಡದ ನೂರು ರಸ್ತೆಗಳು ಬಂದ್, ಕೇದಾರನಾಥ ಯಾತ್ರೆಗೆ ತಡೆ
PC: x.com/the_hindu
ಡೆಹ್ರಾಡೂನ್: ನಿರಂತರ ಧಾರಾಕಾರ ಮಳೆಯಿಂದ ಉತ್ತರಾಖಂಡದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, 100ಕ್ಕೂ ಹೆಚ್ಚು ಪ್ರಮುಖ ರಸ್ತೆಗಳು ಭೂಕುಸಿತದಿಂದ ಮುಚ್ಚಲ್ಪಟ್ಟಿವೆ. ಜತೆಗೆ ದೇಶದ ವಿವಿಧೆಡೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಚಾರ್‌ಧಾಮ ಯಾತ್ರಿಗಳು ಅತಂತ್ರರಾಗಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಪಡೆಯ ಪ್ರಕಾರ, ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 113 ರಸ್ತೆಗಳಲ್ಲಿ ಗುರುವಾರ ಸಂಚಾರಕ್ಕೆ ತಡೆ ಉಂಟಾಗಿದೆ. ಚಮೋಜಿ ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ 23 ರಸ್ತೆಗಳು ಮುಚ್ಚಿದ್ದು, ಪಿತ್ತೋರ್ ಗಢದಲ್ಲಿ 22 ರಸ್ತೆಗಳಲ್ಲಿ ವಾಹನ ಸಂಚಾರ ನಿಂತಿದೆ.
ಸೋನಪ್ರಯಾಗ್-ಗೌರಿಕುಂಡ ರಸ್ತೆಯ ಮನ್ಕುಟಿಯಾ ಎಂಬಲ್ಲಿ ಹಿಂದಿನ ದಿನ ರಾತ್ರಿ 10 ಗಂಟೆಯ ಸುಮಾರಿಗೆ ಭಾರೀ ಭೂಕುಸಿತ ಸಂಭವಿಸಿದ ಕಾರಣದಿಂದ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಇದರಿಂದಾಗಿ ಯಾತ್ರೆ ಮುಗಿಸಿ ಬರುತ್ತಿದ್ದ 40 ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ. ರಾಜ್ಯ ವಿಪತ್ತು ಸ್ಪಂದನೆ ಪಡೆ, ಅವಶೇಷಗಳನ್ನು ತೆರವುಗೊಳಿಸಿ ಕಿರುದಾರಿ ಸೃಷ್ಟಿಸಿ ಯಾತ್ರಿಗಳನ್ನು ಸುರಕ್ಷಿತವಾಗಿ ಕರೆದೊಯ್ದಿದೆ.
ಹಾನಿಗೀಡಾದ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂದು ಅಧಿಕಾರಿಗಳು ಹೇಳಿದ್ದು, ಇತರೆಡೆಗಳಿಂದ ಬರುವ ಯಾತ್ರಿಗಳನ್ನು ಬೇರೆಡೆಗೆ ಕಳುಹಿಸಲಾಗುತ್ತಿದೆ. ರಸ್ತೆ ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮನ್ಕುಟಿಯಾ ಕುಸಿತದ ವಲಯ ಹಾಗೂ ಗೌರಿಕುಂಡ ಬಳಿಯ ಸಣ್ಣ ಪಾರ್ಕಿಂಗ್ ಜಾಗವನ್ನು ಈಗ ಪದಚಾರಿಗಳ ಬಳಕೆಗೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.