ಅಮೆರಿಕದ ಒಳ ಧ್ವನಿ ಝೊಹ್ರಾನ್ ಮಮ್ದಾನಿ!
PC: x.com/mehtahansal
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಟ್ರಂಪ್ ಮತ್ತೆ ಅಧಿಕಾರಕ್ಕೇರಿದ ದಿನದಿಂದ ಅಮೆರಿಕ ಎದುರಿಸುತ್ತಿರುವ ಎಲ್ಲ ಆರೋಪಗಳಿಗೆ ಉತ್ತರವಾಗಿ ಅಲ್ಲಿನ ಜನತೆ ಝೊಹ್ರಾನ್ ಮಮ್ದಾನಿಯನ್ನು ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆ ಮಾಡಿದ್ದಾರೆ. ಭಾರತೀಯ ಮೂಲದ ಮಮ್ದಾನಿ ಡೆಮಾಕ್ರಾಟ್ ಪಕ್ಷದಿಂದ ಸ್ಪರ್ಧಿಸಿ ತಮ್ಮದೇ ಪಕ್ಷದ ಹಿರಿಯ ನಾಯಕ ಆಂಡ್ರೂ ಕುಮೊ ಅವರನ್ನು ಸೋಲಿಸಿ ನ್ಯೂಯಾರ್ಕ್‌ನ
ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಡೊನಾಲ್ಡ್ ಟ್ರಂಪ್‌ನ ಬೆದರಿಕೆ, ಅಮೆರಿಕದ ಕಾರ್ಪೊರೇಟ್ ಲಾಬಿ, ಜನಾಂಗೀಯವಾದ, ಅಲ್ಲಿನ ರಾಜಕೀಯ ಶಕ್ತಿಗಳು ಹರಡುತ್ತಿರುವ ಇಸ್ಲಾಮಾಫೋಬಿಯಾ ಇವೆಲ್ಲವುಗಳಿಗೆ ಮಮ್ದಾನಿ ಗೆಲುವಿನಿಂದಾಗಿ ಭಾರೀ ಹಿನ್ನಡೆಯಾಗಿದೆ. ಟ್ರಂಪ್ ಪ್ರತಿನಿಧಿಸುವ ಅಮೆರಿಕಕ್ಕಿಂತ ಭಿನ್ನವಾದ ಅಮೆರಿಕದ ಒಳಧ್ವನಿ ಮಮ್ದಾನಿಯ ಮೂಲಕ ಹೊರಹೊಮ್ಮಿದೆ. ಇದು ಆಕಸ್ಮಿಕ ರಾಜಕೀಯ ಬೆಳವಣಿಗೆಯಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಮಮ್ದಾನಿಯ ಜೊತೆ ಜೊತೆಗೇ ಇನ್ನೆರಡು ಪ್ರಮುಖ ನಗರಗಳ ಮುಖ್ಯಸ್ಥರಾಗಿ ಭಾರತೀಯ ಮೂಲದ ಅಫ್ತಾಬ್ ಪುರೇವಾಲ್, ಗಝಾಲಾ ಹಷ್ಮಿ ಕೂಡ ಜಯಭೇರಿ ಬಾರಿಸಿದ್ದಾರೆ. ಸಿನ್ಸಿನಾಟಿ ಮೇಯರ್ ಆಗಿ ಅಫ್ತಾಬ್ ಆಯ್ಕೆಯಾದರೆ, ವರ್ಜೀನಿಯಾ ನಗರದ ಲೆ. ಗವರ್ನರ್ ಆಗಿ ಹಷ್ಮಿ ಗೆಲುವು ಸಾಧಿಸಿದ್ದಾರೆ. ನ್ಯೂಯಾರ್ಕ್‌ನ ಜನಮಾನಸದೊಳಗೆ ಮಮ್ದಾನಿಯ ಜನಪ್ರಿಯತೆ ಅಮೆರಿಕ ಅಧ್ಯಕ್ಷ ಟ್ರಂಪ್‌ನ್ನು ಎಷ್ಟರಮಟ್ಟಿಗೆ ಹೆದರಿಸಿತ್ತೆಂದರೆ, ಮಮ್ದಾನಿಯನ್ನು ಆಯ್ಕೆ ಮಾಡದಂತೆ ನ್ಯೂಯಾರ್ಕ್ ಜನತೆಗೆ ನೇರವಾಗಿ ಬೆದರಿಕೆ ಹಾಕಿದ್ದರು. ‘‘ ಮಮ್ದಾನಿ ಒಬ್ಬ ಕಮ್ಯುನಿಸ್ಟ್ ಅಭ್ಯರ್ಥಿಯಾಗಿದ್ದಾರೆ. ಅವರು ಮೇಯರ್ ಚುನಾವಣೆಯಲ್ಲಿ ಗೆದ್ದರೆ ನ್ಯೂಯಾರ್ಕ್‌ಗೆ ಫೆಡರಲ್ ಅನುದಾನ ದೊರಕುವುದಿಲ್ಲ. ಮಮ್ದಾನಿಯ ನಾಯಕತ್ವದಡಿಯಲ್ಲಿರುವ ನ್ಯೂಯಾರ್ಕ್‌ಗೆ ಹಣವನ್ನು ರವಾನಿಸಲು ನನಗೆ ಇಷ್ಟವಿಲ್ಲ. ಆತ ಗೆದ್ದರೆ ನಗರವು ಸಂಪೂರ್ಣ ಸಾಮಾಜಿಕ ಮತ್ತು ಆರ್ಥಿಕ ವಿಪತ್ತಿಗೆ ಸಿಲುಕಲಿದೆ’’ ಎಂದು ಎಚ್ಚರಿಸಿದ್ದರು. ಮಮ್ದಾನಿ ನಿಜಕ್ಕೂ ಗೆದ್ದದ್ದು ತನ್ನ ಎದುರಾಳಿ ಆಂಡ್ರೂ ವಿರುದ್ಧವಲ್ಲ, ಅಮೆರಿಕದ ಅಧ್ಯಕ್ಷ ಟ್ರಂಪ್ ವಿರುದ್ಧ.
ಟ್ರಂಪ್ ಮತ್ತೆ ಅಧ್ಯಕ್ಷ ಸ್ಥಾನಕ್ಕೇರಿದ ದಿನದಿಂದ, ಅಮೆರಿಕ ಅನುಸರಿಸಿಕೊಂಡಿರುವ ಜಾಗತಿಕ ನೀತಿಯ ಜೊತೆಗೆ ನಾವು ಸಹಮತ ಹೊಂದಿಲ್ಲ ಎನ್ನುವುದನ್ನು ಅಮೆರಿಕನ್ನರು ಈ ಚುನಾವಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇಸ್ರೇಲನ್ನು ಮುಂದಿಟ್ಟುಕೊಂಡು ಅಮೆರಿಕವು ಗಾಝದಲ್ಲಿ ನಡೆಸಿದ ರಕ್ತಪಾತದ ಕಳಂಕವನ್ನು ಹೊತ್ತುಕೊಳ್ಳಲು ಸಿದ್ಧರಿಲ್ಲ ಎನ್ನುವುದನ್ನೂ ಅವರು ತಿಳಿಸಿದ್ದಾರೆ. ಮಮ್ದಾನಿ ಫೆಲೆಸ್ತೀನ್ ಪರವಾದ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಲೇ ಚುನಾವಣೆಗೆ ಸ್ಪರ್ಧಿಸಿದ್ದರು. ಫೆಲೆಸ್ತೀನ್‌ನ್ನು ನಾನು ಬೆಂಬಲಿಸುತ್ತೇನೆ ಎಂದು ಘೋಷಣೆ ಮಾಡಿರುವುದಷ್ಟೇ ಅಲ್ಲ, ನಾನು ಮೇಯರ್ ಆದರೆ ಇಸ್ರೇಲ್ ಪ್ರಧಾನಿ ನೆತನ್ಯಾಹು ನ್ಯೂಯಾರ್ಕ್‌ಗೆ ಆಗಮಿಸಿದರೆ ಅವರನ್ನು ಬಂಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಎಲ್ಲಕ್ಕಿಂತಲೂ ಪ್ರಧಾನ ಅಂಶವೆಂದರೆ, ನ್ಯೂಯಾರ್ಕ್ ಅತಿ ಹೆಚ್ಚು ಯಹೂದಿಗಳನ್ನು ಹೊಂದಿರುವ ನಗರವಾಗಿದೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಕ್ಕಳು, ಮಹಿಳೆಯರ ನರಮೇಧವನ್ನು ನಾವು ಬೆಂಬಲಿಸುವುದಿಲ್ಲ ಎಂದು ನ್ಯೂಯಾರ್ಕ್ ಯಹೂದಿಗಳು ಈ ಚುನಾವಣೆಯಲ್ಲಿ ಟ್ರಂಪ್‌ಗೂ, ಇಸ್ರೇಲ್‌ಗೂ ಸ್ಪಷ್ಟಪಡಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಯಹೂದಿಗಳು ಮಮ್ದಾನಿಯ ಪರವಾಗಿ ಬೀದಿಗಿಳಿದು ಪ್ರಚಾರ ನಡೆಸಿದ್ದರು. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿಯ ಕುರಿತಂತೆಯೂ ಮಮ್ದಾನಿ ತನ್ನ ನಿಲುವನ್ನು ಸ್ಪಷ್ಟವಾಗಿ ಘೋಷಿಸಿಕೊಂಡಿದ್ದರು. ಗುಜರಾತ್ ಹತ್ಯಕಾಂಡಕ್ಕೆ ನರೇಂದ್ರ ಮೋದಿಯೇ ಹೊಣೆಗಾರರು ಎಂದು ಆರೋಪಿಸಿದ್ದರು. ಇಷ್ಟಾಗಿಯೂ ಮಮ್ದಾನಿಯ ಪರವಾಗಿ ನ್ಯೂಯಾರ್ಕ್‌ನ ಹಿಂದೂಗಳು ‘ಹಿಂದೂಸ್ ಫಾರ್ ಮಮ್ದಾನಿ’ ಅಭಿಯಾನ ಹಮ್ಮಿಕೊಂಡಿದ್ದರು. ಈ ಮೂಲಕ ನರೇಂದ್ರ ಮೋದಿಯ ದ್ವೇಷ ರಾಜಕಾರಣದಲ್ಲಿ ನಾವು ಗುರುತಿಸಲು ಇಷ್ಟಪಡುವುದಿಲ್ಲ ಎನ್ನುವುದನ್ನು ಅಮೆರಿಕದ ಹಿಂದೂಗಳು ಭಾರತಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಈ ಸಂದೇಶವನ್ನು ಭಾರತ ಸ್ವೀಕರಿಸುವುದಕ್ಕೆ ಸಿದ್ಧವಾಗಬೇಕಾಗಿದೆ.
ಜನರ ಕ್ರೌಡ್ ಫಂಡ್ ಮೂಲಕವೇ ಚುನಾವಣೆಯನ್ನು ಎದುರಿಸುವ ಮೂಲಕ ಮಮ್ದಾನಿ ತಾನು ಅಮೆರಿಕದ ಶ್ರೀಮಂತ ಕುಳಗಳನ್ನು ಪ್ರತಿನಿಧಿಸುವುದಿಲ್ಲ ಎನ್ನುವುದನ್ನು ಆರಂಭದಲ್ಲೇ ಸ್ಪಷ್ಟಪಡಿಸಿದ್ದರು. ಸಮಾಜವಾದಿ ಆಶಯವನ್ನು ಅವರು ಚುನಾವಣಾ ಪ್ರಚಾರದ ಸಂದರ್ಭ ದಲ್ಲಿ ಎತ್ತಿ ಹಿಡಿದಿದ್ದರು. ಈ ಕಾರಣಕ್ಕಾಗಿಯೇ ಮಮ್ದಾನಿಯ ವಿರುದ್ಧ
ನ್ಯೂಯಾರ್ಕ್‌ನ ಬಹುತೇಕ ಬಿಲಿಯಾಧಿಪತಿಗಳು ಕೋಟ್ಯಂತರ ರೂಪಾಯಿ ಸುರಿದು ಆತನ ಸೋಲಿಗೆ ಶ್ರಮಿಸಿದ್ದರು. ಮಮ್ದಾನಿ ಅವರು ಚುನಾವಣೆಯ ಉದ್ದಕ್ಕೂ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣಾ ಪ್ರಚಾರಗಳನ್ನು ನಡೆಸಿದರು. ಕಾರ್ಪೊರೇಟ್‌ಗಳಿಗೆ ಪೂರಕವಾಗಿ ನ್ಯೂಯಾರ್ಕ್ ನಗರದ ಆರ್ಥಿಕತೆಯನ್ನು ಚರ್ಚಿಸದೆ, ಮಧ್ಯಮವರ್ಗದ , ದುಡಿಯುವ ವರ್ಗದ ಆರ್ಥಿಕತೆಗೆ ಪೂರಕವಾಗಿ ನಗರವನ್ನು ರೂಪಿಸುವ ಭರವಸೆಯನ್ನು ನೀಡಿದ್ದರು. ಹೆಚ್ಚುತ್ತಿರುವ ಬಾಡಿಗೆ ದರ, ಬೆಲೆಯೇರಿಕೆಗಳನ್ನು ನಿಯಂತ್ರಿಸುವ ಭರವಸೆಯನ್ನು ನೀಡಿದ್ದರು. ಈ ಭರವಸೆಗೆ ಅಲ್ಲಿನ ಜನರು ಸ್ಪಂದಿಸಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಅಮೆರಿಕದ ಮಧ್ಯಮ, ಮೇಲ್ಮಧ್ಯಮ ವರ್ಗಗಳ ನಿಜವಾದ ಸಮಸ್ಯೆಗಳು ಈ ಚುನಾವಣೆಯ ಮೂಲಕ ಮುನ್ನೆಲೆಗೆ ಬಂದಿದೆ. ಹಾಗೆಯೇ ಸಮಾಜವಾದಿ ಆಶಯಗಳ ಕಡೆಗೆ ಅಮೆರಿಕ ನಿಧಾನಕ್ಕೆ ಮುಖ ಮಾಡುತ್ತಿರುವುದನ್ನು ಫಲಿತಾಂಶ ಹೇಳುತ್ತಿದೆ. ಬಲಪಂಥೀಯ ಚಿಂತನೆಗಳು ಅಮೆರಿಕದ ಭವಿಷ್ಯವನ್ನು ಆತಂಕಕ್ಕೆ ತಳ್ಳಿರುವುದು ಅಲ್ಲಿನ ಜನತೆಗೆ ನಿಧಾನವಾಗಿಯಾದರೂ ಅರ್ಥವಾಗುತ್ತಿರುವಂತಿದೆ.
ಅಮೆರಿಕದ ವೈವಿಧ್ಯತೆಯನ್ನು ಮಮ್ದಾನಿ ಚುನಾವಣೆಯ ಉದ್ದಕ್ಕೂ ಗೌರವಿಸಿದರು. ಇಂಗ್ಲಿಷ್ ಭಾಷಿಗರನ್ನಷ್ಟೇ ಅಲ್ಲ, ಜಗತ್ತಿನ ನಾನಾ ದಿಕ್ಕುಗಳಿಂದ ಅಮೆರಿಕದಲ್ಲಿ ಆಶ್ರಯ ಪಡೆದಿರುವ ಎಲ್ಲ ಸಮುದಾಯಗಳ ಭಾಷೆ ಸಂಸ್ಕೃತಿಗಳನ್ನು ಅವರು ಪ್ರತಿನಿಧಿಸಿದ್ದರು. ಚುನಾವಣೆಯಲ್ಲಿ ಉರ್ದು, ಪರ್ಶಿಯನ್ , ಸ್ಪಾನಿಶ್ ಭಾಷೆಗಳಲ್ಲೂ ಅವರು ಸಂವಾದ ನಡೆಸಿದರು. ಟ್ರಂಪ್‌ರ ಅತಿ ವಾಚಾಳಿತನದಿಂದ ಸುಸ್ತಾಗಿರುವ ಅಮೆರಿಕ ಪ್ರಬುದ್ಧ, ವಿದ್ಯಾವಂತ, ಮುತ್ಸದ್ದಿ ನಾಯಕನೊಬ್ಬನ ಅಗತ್ಯವನ್ನು ಮನಗಂಡು ಮಮ್ದಾನಿಯವರನ್ನು ಆಯ್ಕೆ ಮಾಡಿದೆ.
ಭಾರತ ನಂಬಿಕೊಂಡು ಬಂದಿರುವ ರಾಜಕೀಯ ಮೌಲ್ಯಗಳ ತಳಹದಿಯಲ್ಲಿ ಮಮ್ದಾನಿ ಚುನಾವಣೆಯನ್ನು ಎದುರಿಸಿದರು. ಗೆದ್ದ ಬಳಿಕ ಆ ಕಾರಣಕ್ಕಾಗಿಯೇ ನೆಹರೂ ಅವರನ್ನು ಸ್ಮರಿಸಿದರು. ನೆಹರೂ ಮೌಲ್ಯಗಳು ಅಮೆರಿಕಕ್ಕೆ ಅಗತ್ಯವಿರುವಷ್ಟೇ ಇಂದಿನ ಭಾರತಕ್ಕೂ ಅಗತ್ಯವಿದೆ. ಈ ದೇಶದ ಶ್ರೀಸಾಮಾನ್ಯರ ದೈನಂದಿನ ಬದುಕಿನ ಬಗ್ಗೆ ಕಾಳಜಿವಹಿಸುವ, ಇಲ್ಲಿನ ವೈವಿಧ್ಯತೆಯ ಸೌಹಾರ್ದವನ್ನು ರಕ್ಷಿಸುವ, ಜನಾಂಗೀಯ ದ್ವೇಷವನ್ನು ಅಳಿಸಿ ಎಲ್ಲರನ್ನೂ ಸಮಾಜವಾದಿ ಆಶಯಗಳ ಮೂಲಕ ಒಂದಾಗಿಸುವ ನಾಯಕನೊಬ್ಬನ ಅಗತ್ಯ ಭಾರತಕ್ಕಿದೆ. ಅಮೆರಿಕದಲ್ಲಿ ನಡೆದಿರುವ ಈ ಬದಲಾವಣೆ ಭಾರತದಲ್ಲಿ ಅತ್ಯಗತ್ಯವಾಗಿ ನಡೆಯಬೇಕಾಗಿದೆ. ಟ್ರಂಪ್‌ನ ತಾಳಕ್ಕೆ ತಕ್ಕಂತೆ ಕುಣಿಯಲು ಅಮೆರಿಕದ ಜನತೆಯೇ ಸಿದ್ಧವಿಲ್ಲ ಎಂದು ಘೋಷಿಸಿದ್ದಾರೆ. ಹೀಗಿರುವಾಗ ಟ್ರಂಪ್ ತಾಳಕ್ಕೆ ಕುಣಿಯುವ ನಾಯಕನೊಬ್ಬನ ಅಗತ್ಯ ಭಾರತಕ್ಕಾದರೂ ಯಾಕಿರಬೇಕು? ಯೋಚಿಸುವುದಕ್ಕೆ ಇದು ಸರಿಯಾದ ಸಂದರ್ಭವಾಗಿದೆ.