×
Ad

ಪಹಲ್ಗಾಮ್ ದಾಳಿ: ಖಂಡನೆಗೆ ಅರ್ಹವಾದ ಅಮೆರಿಕದ ದ್ವಂದ್ವ ನಿಲುವು

Update: 2025-11-22 09:21 IST

PC : PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚಿನ ದಿನಗಳಲ್ಲಿ ಅಮೆರಿಕ ಭಾರತದ ಆಂತರಿಕ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಪ್ರಯತ್ನ ನಡೆಸುತ್ತಲೇ ಇದೆ. ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆದ ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದ ಗಡಿಭಾಗದಲ್ಲಿರುವ ಉಗ್ರರ ವಿರುದ್ಧ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ನಡೆಸುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ‘ನನ್ನ ಮಧ್ಯಸ್ಥಿಕೆಯಿಂದ ಪಾಕ್-ಭಾರತ ನಡುವಿನ ಯುದ್ಧ ನಿಂತಿತು’ ಎಂಬ ಅನಗತ್ಯ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದರು. ಭಾರತವು ಇದನ್ನು ತಳ್ಳಿ ಹಾಕಿತಾದರೂ, ಭಾರತಕ್ಕೆ ಮುಜುಗರ ಉಂಟಾಗುವಂತೆ ಟ್ರಂಪ್ ಇದನ್ನು ಪುನರುಚ್ಚರಿಸುತ್ತಲೇ ಬಂದಿದ್ದಾರೆ. ಇದೀಗ ಪಹಲ್ಗಾಮ್ ದಾಳಿಯ ಕುರಿತಂತೆ ಅಮೆರಿಕ ಬಿಡುಗಡೆ ಮಾಡಿರುವ ವರದಿಯು ಹೊಸ ವಿವಾದವನ್ನು ಸೃಷ್ಟಿಸಿದೆ. ಅಮೆರಿಕದ ಭದ್ರತಾ ಪರಿಶೀಲನಾ ವರದಿಯೊಂದು ಅಲ್ಲಿನ ಸಂಸತ್ತಿಗೆ ಸಲ್ಲಿಕೆಯಾಗಿದ್ದು, ಆ ವರದಿಯಲ್ಲಿ ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನಕ್ಕೆ ಕ್ಲೀನ್‌ಚಿಟ್ ನೀಡಲಾಗಿದೆ. ಮಾತ್ರವಲ್ಲ, ‘ಪಹಲ್ಗಾಮ್ ದಾಳಿಯು ಭಾರತದೊಳಗಿನ ಬಂಡಾಯ ಗುಂಪಿನಿಂದ ನಡೆದಿರುವುದು. ಅದಕ್ಕೆ ಭಾರತ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ ಕಾರಣದಿಂದ ಪಾಕಿಸ್ತಾನ-ಭಾರತದ ನಡುವೆ ಯುದ್ಧ ಸ್ಫೋಟಿಸಿತು’ ಎಂದು ಆ ವರದಿಯಲ್ಲಿ ಹೇಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ‘ಈ ಯುದ್ಧದಲ್ಲಿ ಚೀನಾ ಪಾತ್ರ ಜಾಗತಿಕವಾಗಿ ಗಮನಸೆಳೆದಿದೆ. ಈ ಸಂದರ್ಭದಲ್ಲಿ ಚೀನಾದ ಅಸ್ತ್ರಗಳನ್ನು ಪಾಕಿಸ್ತಾನ ಬಳಸಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ವಿರೋಧ ಪಕ್ಷಗಳ ನಾಯಕರು ಅಮೆರಿಕದ ಹೇಳಿಕೆಯನ್ನು ಖಂಡಿಸಿದ್ದು ‘‘ಭಾರತದ ರಾಜತಾಂತ್ರಿಕ ವೈಫಲ್ಯವನ್ನು ಇದು ಹೇಳಿದೆ’’ ಎಂದು ಕಿಡಿಕಾರಿದ್ದಾರೆ. ಆದರೆ ಕೇಂದ್ರ ಸರಕಾರ ಮಾತ್ರ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಪಹಲ್ಗಾಮ್ ದಾಳಿ ನಡೆದಿರುವುದರ ಹಿಂದಿನ ಭದ್ರತಾ ವೈಫಲ್ಯವನ್ನು ಮಾಧ್ಯಮಗಳು ಪ್ರಶ್ನಿಸುತ್ತಲೇ ಬಂದಿತ್ತಾದರೂ, ಕೇಂದ್ರ ಸರಕಾರ ಆ ಪ್ರಶ್ನೆಯನ್ನು ‘ಆಂತರಿಕ ಭದ್ರತೆ’ಯ ಹೆಸರಿನಲ್ಲಿ ಚಿವುಟಿ ಹಾಕುತ್ತಾ ಬಂದಿದೆ. ಅಷ್ಟೊಂದು ಪ್ರವಾಸಿಗರು ನೆರೆದ ಆ ಸ್ಥಳದಲ್ಲಿ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿಯನ್ನು ಯಾಕೆ ನೇಮಕ ಮಾಡಿರಲಿಲ್ಲ ಎನ್ನುವ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೆ ತೀವ್ರ ಸ್ವರೂಪ ಪಡೆಯುವ ಮೊದಲೇ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸರಕಾರ ಘೋಷಿಸಿತು. ದೇಶದ ಜನತೆ ಎಲ್ಲ ಭಿನ್ನಭಿಪ್ರಾಯಗಳನ್ನು ಬದಿಗೊತ್ತಿ, ಸೈನಿಕರ ಜೊತೆಗೆ ನಿಂತರು. ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನದ ಕುಮ್ಮಕ್ಕಿದೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆ ಕಾರಣಕ್ಕಾಗಿಯೇ ದೇಶದ ಜನರು ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಪರಿಣಾಮಕಾರಿಯಾಗಿ ನಡೆದು, ಉಗ್ರರ ಸಂಪೂರ್ಣ ನಿರ್ನಾಮವಾಗಬೇಕು ಎಂದು ಬಯಸಿದ್ದರು. ಆದರೆ ಸರಕಾರ ಅನಿರೀಕ್ಷಿತವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಭಾರತೀಯರನ್ನು ನಿರಾಶೆಗೊಳಿಸಿತು. ಈ ಹೊತ್ತಿಗೆ ಉಭಯ ದೇಶಗಳ ಹಲವು ಯುದ್ಧ ವಿಮಾನಗಳು ಧ್ವಂಸಗೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಉಗ್ರರ ನೆಲೆಗಳನ್ನು ನಾಶ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಭಾರತ ಹೇಳಿಕೊಂಡಿತ್ತು. ಧ್ವಂಸಗೊಂಡ ಭಾರತದ ಯುದ್ಧ ವಿಮಾನಗಳೆಷ್ಟು ಎನ್ನುವ ಪ್ರಶ್ನೆಗಳಿಂದ ರಕ್ಷಣಾ ಸಚಿವರು ನುಣುಚಿಕೊಂಡಿದ್ದರು. ‘‘ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳು ಸರಿಯಲ್ಲ’’ ಎಂದು ಪ್ರಶ್ನಿಸಿದವರನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದರು.

ಇದೀಗ ನೋಡಿದರೆ, ಅಮೆರಿಕವು ‘ಪಹಲ್ಗಾಮ್ ದಾಳಿ ನಡೆದಿರುವುದು ಭಾರತದೊಳಗಿರುವ ಬಂಡಾಯಗಾರರಿಂದ’ ಎಂದು ಹೇಳುತ್ತಿದೆ. ಈ ಮೂಲಕ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನೇ ಅಮೆರಿಕ ಪ್ರಶ್ನೆ ಮಾಡಿದಂತಾಗಿದೆ. ಇದನ್ನು ತಕ್ಷಣ ಖಂಡಿಸಬೇಕಾಗಿದ್ದ ಕೇಂದ್ರ ಸರಕಾರ ತುಟಿ ಬಿಚ್ಚಿಲ್ಲ. ‘ಮೌನ ಸಮ್ಮತಿಯ ಲಕ್ಷಣ’ ಎನ್ನುವ ಮಾತಿದೆ. ಭಾರತ ಸರಕಾರ ಅಮೆರಿಕದ ವರದಿಗೆ ಪ್ರತಿಕ್ರಿಯಿಸದೇ ಇದ್ದರೆ ಅದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ. ಈಗಾಗಲೇ ಈ ವರದಿಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕರು ಸರಕಾರವನ್ನು ಟೀಕೆ ಮಾಡುತ್ತಿದ್ದಾರೆ. ಅದಕ್ಕಾದರೂ ಪ್ರಧಾನಿ ಮೋದಿಯವರು ಪ್ರತಿಕ್ರಿಯಿಸಬೇಕಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಭಾರತ-ಪಾಕ್ ನಡುವೆ ಯುದ್ಧ ಸ್ಫೋಟಗೊಂಡಾಗ ಯಾವುದೇ ನೆರೆ ರಾಷ್ಟ್ರ ಭಾರತದ ಜೊತೆ ನಿಂತಿರಲಿಲ್ಲ. ಈ ಸಂದರ್ಭದಲ್ಲಿ ಭಾರತ ಒಂಟಿಯಾಗಿತ್ತು. ಇದೇ ಹೊತ್ತಿಗೆ ಚೀನಾ ಮತ್ತು ತುರ್ಕಿಯ ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲವನ್ನು ನೀಡಿದ್ದವು. ಹಲವು ದೇಶಗಳು ಪಾಕಿಸ್ತಾನದ ಜೊತೆಗೆ ಮೃದು ನಿಲುವನ್ನು ತಳೆದಿತ್ತು. ಈ ಸ್ಥಿತಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ತೀವ್ರ ಇರಿಸುಮುರಿಸು ಉಂಟು ಮಾಡಿತ್ತು. ಆ ಕಾರಣಕ್ಕಾಗಿಯೇ ಆಪರೇಷನ್ ಸಿಂಧೂರದ ಬೆನ್ನಿಗೇ ಶಶಿತರೂರ್ ಸೇರಿದಂತೆ ಸರ್ವ ಪಕ್ಷ ನಾಯಕರ ನೇತೃತ್ವದಲ್ಲಿ ಭಯೋತ್ಪಾದನೆಯ ವಿರುದ್ಧ ಜಾಗೃತಿ ಮೂಡಿಸಲು ಹಲವು ದೇಶಗಳಿಗೆ ಭಾರತ ನಿಯೋಗಗಳನ್ನು ಕಳುಹಿಸಿತ್ತು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ನಿಯೋಗಗಳು ವಿವಿಧ ದೇಶಗಳ ಮುಖಂಡರನ್ನು ಭೇಟಿ ಮಾಡಿ ಪಾಕಿಸ್ತಾನವು ಹೇಗೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿ ಬಂದಿತ್ತು. ಶಶಿ ತರೂರ್ ನೇತೃತ್ವದಲ್ಲಿ ಒಂದು ತಂಡ ಅಮೆರಿಕ್ಕೂ ಭೇಟಿ ನೀಡಿತ್ತು. ಆದರೆ, ಈ ಭೇಟಿ ಅಂತಿಮವಾಗಿ ನೀಡಿದ ಫಲಿತಾಂಶವಾದರೂ ಏನು? ಇದೀಗ ಭಾರತ ಆತ್ಮಾವಲೋಕನ ಮಾಡಬೇಕು.

ಭಯೋತ್ಪಾದನೆಯ ವಿರುದ್ಧ ವಿಶ್ವವನ್ನು ಜಾಗೃತಗೊಳಿಸಲು ನಿಯೋಗವನ್ನು ಕಳುಹಿಸಿದ ಹೊತ್ತಿನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಪಾಕಿಸ್ತಾನವನ್ನು ನೇಮಕ ಮಾಡಲಾಯಿತು. ಅಷ್ಟೇ ಅಲ್ಲ, ತಾಲಿಬಾನ್ ನಿರ್ಬಂಧ ಸಮಿತಿಯ 2025ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕೂ ಪಾಕಿಸ್ತಾನವನ್ನು ನೇಮಿಸಲಾಯಿತು. ಇದು ಭಾರತದ ರಾಜತಾಂತ್ರಿಕತೆಗೆ ಒದಗಿದ ಅತಿ ದೊಡ್ಡ ಹಿನ್ನಡೆಯಾಗಿತ್ತು. ಇದೀಗ ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪಾಕಿಸ್ತಾನದ ಜೊತೆಗೆ ಸಂಬಂಧವೇ ಇಲ್ಲ ಎಂದು ಸಾಬೀತು ಪಡಿಸುವ ಹವಣಿಕೆಯಲ್ಲಿದೆ ಅಮೆರಿಕ. ಇದನ್ನು ಭಾರತ ಒಪ್ಪಿಕೊಳ್ಳುತ್ತದೆಯೆ? ಒಪ್ಪಿಕೊಂಡದ್ದೇ ಆದರೆ, ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಾಕೆ ನಡೆಯಿತು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆದುದರಿಂದ, ಉಗ್ರರ ಕುರಿತಂತೆ, ಭಯೋತ್ಪಾದನೆಯ ಕುರಿತಂತೆ ಅಮೆರಿಕವು ಅನುಸರಿಸುತ್ತಿರುವ ಪಕ್ಷಪಾತಿ ನಿಲುವನ್ನು ಭಾರತವು ಸ್ಪಷ್ಟ ಮಾತಿನಲ್ಲಿ ಖಂಡಿಸುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News