×
Ad

ವಾಂಗ್ಚುಕ್ ಸೋಲಬಾರದು, ಯಾಕೆಂದರೆ...

Update: 2025-10-04 06:47 IST

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸೋನಮ್ ವಾಂಗ್ಚುಕ್‌ರನ್ನು ಬಂಧಿಸಿ ಅವರ ತಲೆಗೆ ‘ದೇಶದ್ರೋಹ’ದ ಮುಳ್ಳಿನ ಕಿರೀಟವನ್ನಿಟ್ಟರೆ ಲಡಾಖ್‌ನ ಬಾಯಿ ಮುಚ್ಚಿಸಬಹುದು ಎನ್ನುವ ಕೇಂದ್ರ ಸರಕಾರದ ತಂತ್ರ ಬಹುತೇಕ ವಿಫಲವಾಗಿದೆ. ವಾಂಗ್ಚುಕ್ ಅವರ ಬಂಧನದಿಂದಾಗಿ ಲಡಾಖ್ ಜನರ ಹೋರಾಟದ ವ್ಯಾಪ್ತಿ ಇನ್ನಷ್ಟು ಹಿಗ್ಗಿದೆ. ಆಕ್ರೋಶ ಈಗ ಬರೇ ಲಡಾಖ್‌ಗಷ್ಟೇ ಸೀಮಿತವಾಗಿ ಉಳಿಯದೆ ಕಾಶ್ಮೀರದ ಕಣಿವೆಯಾದ್ಯಂತ ವಿಸ್ತರಿಸುವ ಸಾಧ್ಯತೆ ಕಾಣುತ್ತಿದೆ. ಲಡಾಖ್‌ನ ಜನರಂತೂ ಕೇಂದ್ರವನ್ನು ನಂಬಿ ಕೆಟ್ಟಂತಾಗಿದೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಕಿತ್ತುಕೊಂಡು, ಲಡಾಖನ್ನು ಪ್ರತ್ಯೇಕಿಸಿದಾಗ ಅದನ್ನು ವಾಂಗ್ಚುಕ್ ಬೆಂಬಲಿಸಿದ್ದರು. ಅವರು ಸದಾ ಭಾರತೀಯ ಸೇನೆಗೆ ನೈತಿಕ ಬೆಂಬಲವನ್ನು ನೀಡುತ್ತಾ ಬಂದವರು. ಲಡಾಖ್‌ನಲ್ಲಿ ಚೀನಾ ಹಸ್ತಕ್ಷೇಪ ನಡೆಸುತ್ತಿದ್ದಾಗ ಚೀನಾದ ವಿರುದ್ಧ ಲಡಾಖ್ ಜನರನ್ನು ಸಂಘಟಿಸಿದವರು. ಲಡಾಖ್‌ನ ಸೂಕ್ಷ್ಮ ಪರಿಸರದ ಮೇಲೆ ಹಸ್ತಕ್ಷೇಪಗಳು ನಡೆದಾಗ ಅದರ ವಿರುದ್ಧ ಧ್ವನಿಯೆತ್ತಿದವರು. ಇದೀಗ ಲಡಾಖ್ ಬೆನ್ನಿಗೆ ಚೂರಿ ಹಾಕಲಾಗಿದೆ. ನೀಡಿದ ಭರವಸೆಯನ್ನು ಕೇಂದ್ರ ಸರಕಾರ ಈಡೇರಿಸದೇ ಇದ್ದಾಗ ಅನಿವಾರ್ಯವಾಗಿ ವಾಂಗ್ಚುಕ್ ಲಡಾಖ್‌ನ ಹಿತಾಸಕ್ತಿಯನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು. ಅವರೆಂದೂ ಉಗ್ರವಾದವನ್ನು ಬೆಂಬಲಿಸಿದವರಲ್ಲ. ಉಗ್ರರ ಪರವಾಗಿ ಹೇಳಿಕೆಯನ್ನೂ ನೀಡಿದವರಲ್ಲ. ಗಾಂಧೀಜಿಯ ಉಪವಾಸ ಸತ್ಯಾಗ್ರಹದ ಮೇಲೆ ನಂಬಿಕೆಯಿಟ್ಟು ಅದೇ ದಾರಿಯಲ್ಲಿ ತಮ್ಮ ಹೋರಾಟವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಇದೀಗ ಪ್ರತಿಭಟನೆಯನ್ನು ದಮನಿಸುವ ಭಾಗವಾಗಿ ಸೋನಮ್ ವಾಂಗ್ಚುಕ್‌ರನ್ನು ಪಾಕಿಸ್ತಾನದ ಏಜೆಂಟ್ ಎಂಬಂತೆ ಬಿಂಬಿಸಲು ಹೊರಟ ಕೇಂದ್ರದ ನಡೆ ಅಲ್ಲಿನ ಜನರನ್ನು ಕೆರಳಿಸಿದೆ. ವಿಶೇಷ ಸ್ಥಾನಮಾನವನ್ನು ಹಿಂದೆಗೆದಿರುವುದು ಲಡಾಖ್ ಮೇಲಿನ ಕಾಳಜಿಯಿಂದಲ್ಲ, ಬದಲಿಗೆ ಬೃಹತ್ ಉದ್ಯಮಿಗಳಿಗೆ, ಹೊರಗಿನ ಜನರಿಗೆ ಲಡಾಖ್‌ನ್ನು ಬಲಿಕೊಡುವ ದುರುದ್ದೇಶದಿಂದ ಎನ್ನುವುದು ಅವರಿಗೆ ಅರ್ಥವಾಗಿದೆ.

ಎನ್‌ಎಸ್‌ಎ ಕಾಯ್ದೆಯಡಿ ವಾಂಗ್ಚುಕ್ ಅವರ ಬಂಧನದ ಬೆನ್ನಿಗೇ ಅವರಿಗೂ ಪಾಕಿಸ್ತಾನಕ್ಕೂ ನಂಟಿನ ಕತೆಯೊಂದನ್ನು ಪೊಲೀಸ್ ಇಲಾಖೆ ಹೆಣೆದಿದೆ. ಪಾಕಿಸ್ತಾನದ ಪತ್ರಿಕೆಯೊಂದರ ಜೊತೆಗೆ ಮಾತನಾಡಿದ್ದಾರೆ ಎನ್ನುವುದನ್ನೇ ಮುಂದಿಟ್ಟುಕೊಂಡು ಅವರಿಗೂ ಪಾಕಿಸ್ತಾನಕ್ಕೂ ನಂಟಿದೆ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಆ ಮೂಲಕ, ಲಡಾಖ್‌ನ ಪರಿಸರ ಮತ್ತು ಜನತೆಯ ಪರವಾಗಿ ಅವರು ನಡೆಸುತ್ತಿರುವ ಹೋರಾಟಕ್ಕೆ ಪಾಕಿಸ್ತಾನದ ಕುಮ್ಮಕ್ಕಿದೆ ಎನ್ನುವುದನ್ನು ಸಾಬೀತು ಮಾಡಲು ಯತ್ನಿಸುತ್ತಿದೆ. ಈ ಹಿಂದೆ ಪೌರತ್ವ ಕಾಯ್ದೆಯ ವಿರುದ್ಧದ ಹೋರಾಟವನ್ನು ಸರಕಾರ ಇದೇ ರೀತಿಯಲ್ಲಿ ಬಗ್ಗು ಬಡಿದು ಉಮರ್‌ಖಾಲಿದ್ ಸೇರಿದಂತೆ ಹಲವು ಹೋರಾಟಗಾರರನ್ನು ದೇಶವಿರೋಧಿ ಕಾಯ್ದೆಯಡಿ ಬಂಧಿಸಿ ಜೈಲಿಗೆ ತಳ್ಳಿತ್ತು. ಅದೇ ತಂತ್ರವನ್ನು ವಾಂಗ್ಚುಕ್ ವಿರುದ್ಧವೂ ಬಳಸುವುದಕ್ಕೆ ಸರಕಾರ ಮುಂದಾಗಿದೆ. ‘ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನ ಕುಮ್ಮಕ್ಕು ನೀಡಿದೆ’ ಎಂದಾಗ ಅದನ್ನು ಜಗತ್ತು ನಂಬಿತು. ಒಂದು ಕಾಲದಲ್ಲಿ ಭಾರತದ ಹಿತಾಸಕ್ತಿಯ ಪರವಾಗಿ ಕೆಲಸ ಮಾಡಿದ್ದ ಆದರೆ ಇದೀಗ ಲಡಾಖ್‌ನ ಜನರ ಉದ್ಯೋಗ, ಅಲ್ಲಿನ ಪರಿಸರದ ಪರವಾಗಿ ಧ್ವನಿಯೆತ್ತಿದ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ವಾಂಗ್ಚುಕ್ ಅವರ ಹಿಂದೆಯೂ ಪಾಕಿಸ್ತಾನ ಇದೆ ಎಂದು ಪ್ರತಿಭಟನೆಯನ್ನು ದಮನಿಸಲು ನೋಡಿದರೆ ಅದರಿಂದ ಲಾಭ ಪಾಕಿಸ್ತಾನಕ್ಕೆ ಹೊರತು ಭಾರತಕ್ಕಲ್ಲ. ‘ವಾಂಗ್ಚುಕ್’ ರಂತಹ ಜನಪರ ಹೋರಾಟಗಾರರನ್ನು ಪಾಕಿಸ್ತಾನಿ ಏಜೆಂಟ್‌ಗಳಾಗಿ ಬಿಂಬಿಸುವುದರಿಂದ ನಷ್ಟ ಭಾರತಕ್ಕೆ ಹೊರತು, ಪಾಕಿಸ್ತಾನಕ್ಕಲ್ಲ, ಇಂತಹ ತಂತ್ರದ ಮೂಲಕ ಲಡಾಖ್ ಜನರ ಆಕ್ರೋಶವನ್ನು ತಡೆದು ನಿಲ್ಲಿಸಲು ಸಾಧ್ಯವೂ ಇಲ್ಲ.

ಭಾರತದ ಪಾಲಿಗೆ ನಿನ್ನೆ ಮೊನ್ನೆಯವರೆಗೆ ಹೀರೋ ಆಗಿದ್ದ ವಾಂಗ್ಚುಕ್ ಏಕಾಏಕಿ ‘ವಿಲನ್’ ಆದದ್ದು ಯಾಕೆ ಎನ್ನುವ ಪ್ರಶ್ನೆಯನ್ನು ಹಲವು ರಾಜಕೀಯ ನಾಯಕರು ಕೇಳುತ್ತಿದ್ದಾರೆ. ತನ್ನ ಪತಿಗೆ ಸರಕಾರ ಕಿರುಕುಳ ನೀಡುತ್ತಿದೆ ಎಂದು ವಾಂಗ್ಚುಕ್ ಪತ್ನಿ ಗೀತಾಂಜಲಿ ಆರೋಪ ಮಾಡಿದ್ದಾರೆ ಮಾತ್ರವಲ್ಲ, ಈ ಬಗ್ಗೆ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಪತ್ರವನ್ನೂ ಬರೆದಿದ್ದಾರೆ. ಪತಿಯೊಂದಿಗೆ ಮಾತನಾಡಲೂ ಗೀತಾಂಜಲಿ ಅವರಿಗೆ ಅವಕಾಶವನ್ನು ನೀಡಲಾಗುತ್ತಿಲ್ಲ. ಪತಿಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಇದೀಗ ಬಂಧನವನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ವಾಂಗ್ಚುಕ್ ಅವರ ಬಿಡುಗಡೆಯಾಗದೆ ಸರಕಾರದ ಜೊತೆಗೆ ಮಾತುಕತೆಯಿಲ್ಲ ಎನ್ನುವುದನ್ನು ಅಲ್ಲಿನ ಸಂಘಟನೆಗಳು ಸ್ಪಷ್ಟಪಡಿಸಿವೆ.

ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಲಡಾಖ್ ಜನರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಅತ್ಯಂತ ನಾಚಿಕೆಗೇಡಿನದ್ದು. ಲಡಾಖ್ ಸೇರಿದಂತೆ ಇಡೀ ಕಾಶ್ಮೀರದಲ್ಲಿ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಎರಡು ದಾರಿಗಳನ್ನು ಆರಿಸಿಕೊಂಡಿದ್ದಾರೆ. ಒಂದು ಉಗ್ರವಾದ. ಅದು ವಿಫಲದಾರಿ ಎನ್ನುವುದು ಈಗಾಗಲೇ ಸಾಬೀತಾಗಿದೆ. ಆ ದಾರಿಯಲ್ಲಿ ನಡೆದವರನ್ನು ಬಳಸಿಕೊಂಡು ನೆರೆಯ ಪಾಕಿಸ್ತಾನ ತನ್ನ ದುರುದ್ದೇಶಗಳನ್ನು ಸಾಧಿಸಿಕೊಳ್ಳುತ್ತಿದೆ. ಇನ್ನೊಂದು ಪ್ರಜಾಸತ್ತಾತ್ಮಕ ದಾರಿ. ವಾಂಗ್ಚುಕ್ ಈ ಪ್ರಜಾಸತ್ತಾತ್ಮಕವಾದ, ಗಾಂಧೀವಾದದ ದಾರಿಯನ್ನು ಆಯ್ದುಕೊಂಡು ಇಡೀ ದೇಶಕ್ಕೆ ಮಾದರಿಯಾದವರು. ಇಂತಹ ಹೋರಾಟಗಳಿಗೆ ಸರಕಾರ ಸ್ಪಂದಿಸುವ ಮೂಲಕ, ಪ್ರಜಾಸತ್ತಾತ್ಮಕ ದಾರಿಯಲ್ಲಿ ಮುನ್ನಡೆಯಲು ಇತರ ಹೋರಾಟಗಾರರಿಗೂ ಸ್ಫೂರ್ತಿ ನೀಡಬೇಕು. ಆದರೆ ಇಂತಹ ಅಹಿಂಸಾ ಹೋರಾಟಗಳನ್ನು ದಮನಿಸಿ ಅವುಗಳನ್ನು ಹಿಂಸಾರೂಪಕ್ಕೆ ತಿರುಗಿಸಲು ಸರಕಾರವೇ ಪ್ರಯತ್ನಿಸುತ್ತಿದೆ. ಗಾಂಧೀವಾದದ ಮೇಲೆ ನಂಬಿಕೆಯಿಟ್ಟ ನಾಯಕನ ತಲೆಗೆ ಸರಕಾರವೇ ಉಗ್ರವಾದದ ಮುಳ್ಳಿನ ಕಿರೀಟ ಇಟ್ಟು ಆತನನ್ನು ಉಗ್ರವಾದಿಗಳಿಗೆ ಒಪ್ಪಿಸಲು ಮುಂದಾಗಿದೆ. ಇದರ ಲಾಭವನ್ನು ಕಾಶ್ಮೀರ ಕಣಿವೆಯಲ್ಲಿರುವ ಉಗ್ರವಾದಿ ಸಂಘಟನೆಗಳು ತಮ್ಮದಾಗಿಸಿಕೊಳ್ಳಬಹುದು ಎನ್ನುವ ಪ್ರಾಥಮಿಕ ಅರಿವೂ ಸರಕಾರಕ್ಕೆ ಇದ್ದಂತಿಲ್ಲ. ಪ್ರಜಾಸತ್ತಾತ್ಮಕವಾದ ತಮ್ಮ ಹೋರಾಟಕ್ಕೆ ಆದ ಹಿನ್ನಡೆಯು ಅಲ್ಲಿನ ಜನರಲ್ಲಿ ಭ್ರಮನಿರಸನ ಉಂಟು ಮಾಡಿದರೆ ಅದನ್ನು ಉಗ್ರವಾದಿಗಳು ಬಳಸಿಕೊಳ್ಳಲು ಮುಂದಾಗುವ ಸಾಧ್ಯತೆಗಳಿವೆ. ಲಡಾಖ್‌ನಲ್ಲಿ ಹಸ್ತಕ್ಷೇಪ ನಡೆಸಲು ನೆರೆಯ ಚೀನಾವೂ ಸಂದರ್ಭಕ್ಕಾಗಿ ಕಾಯುತ್ತಿರುವಾಗ ಕೇಂದ್ರ ಸರಕಾರವು ನಮ್ಮದೇ ಜನರನ್ನು ಶತ್ರುಗಳ ಗುಂಪಿಗೆ ಸೇರಿಸಿ ಅವರ ಅವರ ಹಣೆಗೆ ಕೋವಿಯಿಡುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ. ಈ ಮೂಲಕ ಲಡಾಖನ್ನಾಗಲಿ, ಕಾಶ್ಮೀರವನ್ನಾಗಲಿ ಭಾರತದ ಅವಿಭಾಜ್ಯ ಅಂಗವನ್ನಾಗಿಸಲು ಸಾಧ್ಯವಿಲ್ಲ. ಲಡಾಖ್‌ನ ಜನರು ಭಾರತದ ಮೇಲೆ ಒಮ್ಮೆ ನಂಬಿಕೆ ಕಳೆದುಕೊಂಡರೆ, ಆ ಬಿರುಕನ್ನು ಯಾವುದೇ ಸೇನಾ ಜಮಾವಣಿಯಿಂದ ಮರು ಜೋಡಿಸಲು ಸಾಧ್ಯವಿಲ್ಲ. ಈ ಕಾರಣದಿಂದ ವಾಂಗ್ಚುಕ್ ಅವರ ಪ್ರಜಾಸತ್ತಾತ್ಮಕ ಹೋರಾಟ ಯಾವ ಕಾರಣಕ್ಕೂ ಸೋಲಬಾರದು. ವಾಂಗ್ಚುಕ್ ಸೋತರೆ ಲಡಾಖ್‌ನಲ್ಲಿ ಭಾರತ ಸೋತಂತೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News