Bhadravathi | 1 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಇಒ
ಎ.ಕೆ.ನಾಗೇಂದ್ರಪ್ಪ
ಶಿವಮೊಗ್ಗ : ತಮ್ಮ ಕಚೇರಿಯ ಸಿಬ್ಬಂದಿಯಿಂದಲೇ 1 ಲಕ್ಷ ರೂ. ಲಂಚ ಪಡೆದ ಭದ್ರಾವತಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಅವರು ಮಧ್ಯವರ್ತಿ ಜೊತೆಗೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಭದ್ರಾವತಿ ಬಿಇಒ ಕಚೇರಿಯ ಅಧೀಕ್ಷಕರಾದ ಲಿಂಗರಾಜು ಎಂಬುವವರಿಗೆ 2011 ರಿಂದ 2023 ರವರೆಗೆ ವೇತನ ಭಡ್ತಿ ಮತ್ತು ಇತರೇ ಭತ್ಯೆಗಳ ಹಣ ಬಾಕಿ ಇತ್ತು. ಇದನ್ನು ಮಂಜೂರು ಮಾಡಲು ಹಲವು ಬಾರಿ ಬಿಇಒ ನಾಗೇಂದ್ರಪ್ಪ ಅವರನ್ನು ಕೋರಿದ್ದರು.
ಬಿಇಒ ಅವರು ಮಧ್ಯವರ್ತಿ ಮಂಜುನಾಥ ಎಂಬವರ ಮೂಲಕ ಬಾಕಿ ಮಂಜೂರು ಮಾಡಲು 4 ಲಕ್ಷ ರೂಪಾಯಿ ಲಂಚ ಕೇಳಿದ್ದರು. ಈ ಬಗ್ಗೆ ಲಿಂಗರಾಜು ಅವರು ಲೋಕಾಯುಕ್ತ ಪೋಲೀಸರಿಗೆ ದೂರು ನೀಡಿದ್ದರು.
ಸೋಮವಾರ ರಾತ್ರಿ 7 ಗಂಟೆ ವೇಳೆಗೆ ಬಿಇಒ ನಾಗೇಂದ್ರಪ್ಪ ಮತ್ತು ಮಧ್ಯವರ್ತಿ ಮಂಜುನಾಥ 1 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ವೀರಬಸಪ್ಪ ಮತ್ತವರ ಸಿಬ್ಬಂದಿ ಬಿಇಒ ಮತ್ತು ಮಧ್ಯವರ್ತಿಯನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.