Shivamogga | ಸ್ನೇಹಿತರ ನಡುವಿನ ಗಲಾಟೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯ
ಶಾಲೆ ತೊರೆದಿದ್ದ ಬಾಲಕರಿಂದ ಕೃತ್ಯ ಶಂಕೆ, ಇಬ್ಬರು ಅಪ್ರಾಪ್ತರು ವಶಕ್ಕೆ
ಶಿವಮೊಗ್ಗ: ಎಸೆಸೆಲ್ಸಿ ವಿದ್ಯಾರ್ಥಿಯೊಬ್ಬನನ್ನು ಕೊಲೆಗೈದಿರುವ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ಸರ್ಕಾರಿ ಫ್ರೌಢಶಾಲೆಯಲ್ಲಿ ಎಸೆಸೆಲ್ಸಿ ಓದುತ್ತಿದ್ದ ಬಾಲಕ, ಪರೀಕ್ಷೆ ಹಿನ್ನೆಲೆಯಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಹೋಗುವ ವೇಳೆ 3ರಿಂದ 4 ಬಾಲಕರು ಶಾಲೆಯಿಂದ ಅನತಿ ದೂರದಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ತೀವ್ರ ಅಸ್ತಸ್ವಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಶಾಲೆಯನ್ನು ಮಧ್ಯದಲ್ಲೇ ತೊರೆದಿದ್ದ ಬಾಲಕರಿಂದಲೇ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಬಾಲಕನ ಮೃತದೇಹ ಸರ್ಕಾರಿ ಮೆಗ್ಗಾನ್ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಶವಾಗಾರಕ್ಕೆ ಶಿವಮೊಗ್ಗ ಎಸ್ಪಿ ನಿಖಿಲ್ ಭೇಟಿ ನೀಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ನಿಖಿಲ್ ಅವರು, ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಕೈಯಲ್ಲಿ ಗುದ್ದಿದ ಪರಿಣಾಮ ಬಾಲಕ ಅಸ್ವಸ್ಥಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.ಈ ಘಟನೆ ಕುರಿತು ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.