Shivamogga | ವಿದ್ಯಾರ್ಥಿ ಸಂಕೇತ್ ಹತ್ಯೆ ಖಂಡಿಸಿ ಬೀದಿಗಿಳಿದ ಸೂಳೆಬೈಲು ಗ್ರಾಮಸ್ಥರು
ಗ್ರಾಮದಲ್ಲಿ ಮಾದಕವಸ್ತು ಹಾವಳಿ ನಿಯಂತ್ರಿಸಲು ಒಕ್ಕೊರಲ ಆಗ್ರಹ
ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ಊರುಗಡೂರಿನ ಸೂಳೆಬೈಲಿನಲ್ಲಿ ಮೂರು ದಿನಗಳ ಹಿಂದೆ ನಡೆದ ಬಾಲಕ ಸಂಕೇತ್ನ ಭೀಕರ ಹತ್ಯೆಯನ್ನು ಖಂಡಿಸಿ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಬುಧವಾರ ರಾತ್ರಿ ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಒಗ್ಗಟ್ಟಾಗಿ ಸಂಕೇತ್ ಭಾವಚಿತ್ರವಿರುವ ಬ್ಯಾನರ್ ಹಿಡಿದು ಬೀದಿಗೆ ಇಳಿದಿದ್ದ ಗ್ರಾಮಸ್ಥರು, ಮೊಂಬತ್ತಿ ಬೆಳಗುವ ಮೂಲಕ ಹತ್ಯೆಯನ್ನು ಖಂಡಿಸಿದರು. ಬಡಾವಣೆಯಲ್ಲಿ ಶಾಂತಿ ನೆಲೆಸುವಂತೆ ಒತ್ತಾಯಿಸಿದರು.
ಸಂಕೇತ್ ಹತ್ಯೆಗೆ ಬಡಾವಣೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮಾದಕ ವಸ್ತು ಮಾರಾಟ ಮತ್ತು ಅಕ್ರಮವಾಗಿ ತಲೆಯೆತ್ತಿರುವ ಸಣ್ಣ ಸಣ್ಣ ಮದ್ಯದ ಅಂಗಡಿಗಳೇ ಮೂಲ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಮಾಯಕ ಯುವಕರನ್ನು ಬಲಿ ಪಡೆಯುತ್ತಿರುವ ಈ ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಕ್ರಮವಾಗಿ ಸಿಗುತ್ತಿರುವ ಗಾಂಜಾ ಮತ್ತು ಮದ್ಯದಿಂದಾಗಿ ಸೂಳೆಬೈಲು ಭಾಗದ ಯುವಕರು ಮತ್ತು ಶಾಲಾ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇಂತಹ ಚಟುವಟಿಕೆಗಳಿಗೆ ತಕ್ಷಣವೇ ಬ್ರೇಕ್ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಳಿಕ ಎಎಸ್ಪಿ ಕಾರ್ಯಪ್ಪರನ್ನು ಭೇಟಿ ಮಾಡಿದ ಗ್ರಾಮಸ್ಥರು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದರು.