×
Ad

Shivamogga | ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಆಗ್ರಹ: ರೈತರಿಂದ ರಾ.ಹೆದ್ದಾರಿ ತಡೆ, ಧರಣಿ

Update: 2026-03-02 15:02 IST

ಶಿವಮೊಗ್ಗ: ದಶಕಗಳ ಕಾಲದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಹಾಗೂ ಅರಣ್ಯ ಭೂಮಿ ಸಾಗುವಳಿದಾರರ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಮಲೆನಾಡು ರೈತ ಹೋರಾಟ ಸಮಿತಿಯ ವತಿಯಿಂದ ಸೋಮವಾರ ಸಿಗಂದೂರು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಯಿತು.

ಮಲೆನಾಡು ರೈತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್ ನೇತೃತ್ವದಲ್ಲಿ ಸಿಗಂದೂರು ಸೇತುವೆ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ನೂರಾರು ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿ ಭೂಮಿ ನಂಬಿ ಬದುಕುತ್ತಿರುವ ತಮಗೆ ಕೂಡಲೇ ಹಕ್ಕುಪತ್ರ ನೀಡಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದ ಸಾಗುವಳಿದಾರರು, 1964ರಿಂದಲೂ ಮುಳುಗಡೆ ಸಂತ್ರಸ್ತರು ಅನುಭವಿಸುತ್ತಿರುವ ನೋವನ್ನು ಆಲಿಸುವಲ್ಲಿ ಶಾಸಕಾಂಗ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಂದು ವರ್ಷದೊಳಗೆ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಮೂರು ವರ್ಷ ಕಳೆದರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಮಲೆನಾಡ ರೈತರ ಸಂಕಷ್ಟದ ವಿಷಯದಲ್ಲಿ ಸರಕಾರ ತೋರುತ್ತಿರುವ ನಿರ್ಲಕ್ಷ್ಯ ಖಂಡನೀಯ ಎಂದರು.

ಒಂದು ವೇಳೆ ಸಮಸ್ಯೆ ಶೀಘ್ರವಾಗಿ ಇತ್ಯರ್ಥವಾಗದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಸಚಿವರ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಕೆ ನೀಡಿದರು.

ರೈತ ಹೋರಾಟ ಸಮಿತಿಯ ಕಾನೂನು ಸಲಹೆಗಾರ, ವಕೀಲ ಕುಮಾರಸ್ವಾಮಿ ಮಾತನಾಡಿ, ಜನ ಸಾಮಾನ್ಯರ ಬದುಕಿಗೆ ಅರ್ಥವಿಲ್ಲದಂತೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಪ್ರಾಣಿಗಳಿಗೆ ತೋರಿಸುವ ದಯೆಯನ್ನ ಮನುಷ್ಯರಿಗೆ ತೋರಿಸುತ್ತಿಲ್ಲ. ಅಭಯಾರಣ್ಯ ಘೋಷಣೆಯಾಗುವ ಮುನ್ನವೇ ಜನರು ವಾಸವಿದ್ದಾರೆ. ಅದನ್ನು ಪರಿಗಣಿಸಲಿ ಎಂದು ಒತ್ತಾಯಿಸಿದರು.

ಪ್ರಮುಖರಾದ ಕೆ.ಎಸ್ ಪ್ರಶಾಂತ್, ಹೂವಣ್ಣ ಹುರಳಿ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News