Shivamogga | "ಕ್ರಿಕೆಟ್ ಆಟದ ವಿಚಾರವಾಗಿ ನಡೆದ ಗಲಾಟೆ": ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಹತ್ಯೆ ಪ್ರಕರಣ ಕುರಿತು ಎಸ್ಪಿ ಹೇಳಿದ್ದೇನು?
7 ಮಂದಿ ಬಾಲಕರು ಪೊಲೀಸ್ ವಶಕ್ಕೆ
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಮಂದಿ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಅವರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ ಕ್ರಿಕೆಟ್ ಆಟದ ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆಯು ಹತ್ಯೆಯಲ್ಲಿ ಅಂತ್ಯವಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೃತ ಬಾಲಕನ ಜೊತೆ ಆರೋಪಿಗಳು ಕಳೆದ ಎರಡು ದಿನಗಳ ಹಿಂದೆಯೇ ಕ್ರಿಕೆಟ್ ಆಟದ ವಿಚಾರವಾಗಿ ಜಗಳವಾಡಿದ್ದರು. ಘಟನೆಯ ದಿನ ಬೇರೊಬ್ಬನ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಜಗಳ ಬಿಡಿಸಲು ಹೋದ ಮೃತ ಬಾಲಕನ ಮೇಲೆ ಆರೋಪಿಗಳು ಕೈಯಿಂದ ತೀವ್ರವಾಗಿ ಗುದ್ದಿದ್ದಾರೆ. ಇದರಿಂದ ಗಂಭೀರ ಪೆಟ್ಟು ಬಿದ್ದು ಬಾಲಕ ಮೃತಪಟ್ಟಿದ್ದಾನೆ ಎಂದು ವಿವರಿಸಿದರು.
ಘಟನೆ ವಿವರ:
ಸ್ನೇಹಿತರ ನಡುವೆ ನಡೆದ ಗಲಾಟೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಯೋರ್ವ ಕೊಲೆಯಾಗಿರುವ ಘಟನೆ ಶಿವಮೊಗ್ಗ ನಗರದ ಹೊರವಲಯದ ಊರುಗಡೂರಿನಲ್ಲಿ ನಡೆದಿದೆ. ಊರುಗಡೂರು ಸರಕಾರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಸಂಕೇತ್ (16) ಮೃತಪಟ್ಟ ಬಾಲಕ.
ಎಸೆಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿಶೇಷ ತರಗತಿಗಳು ನಡೆಯುತ್ತಿದ್ದು, ಅದರಂತೆ ವಿದ್ಯಾರ್ಥಿಯು ಸೋಮವಾರ ರಾತ್ರಿ ತರಗತಿ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಇದನ್ನು ಬಿಡಿಸಲು ಹೋದ ಸಂಕೇತ್ ಮೇಲೆ ಹಲ್ಲೆ ನಡೆಸಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡು ಬಾಲಕ ಕುಸಿದು ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಊರುಗಡೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಆಗಮಿಸಿ ಪರಿಶೀಲನೆ ನಡೆಸಿದರು.
ಸಂತಾಪ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸರ್ಕಾರದಿಂದ ಪರಿಹಾರ ಘೋಷಣೆ:
ಶಿವಮೊಗ್ಗದ ಬಡಾವಣೆಯೊಂದರಲ್ಲಿ ನಡೆದ 10ನೇ ತರಗತಿಯ ಅಪ್ರಾಪ್ತ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮೃತನ ಕುಟುಂಬಕ್ಕೆ ಪರಿಹಾರ ಘೋಷಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮೂಲಕ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಒಟ್ಟು 15 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ,ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯ ಮೇರೆಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಘೋಷಿತ ಪರಿಹಾರದಲ್ಲಿ 10 ಲಕ್ಷ ರೂಪಾಯಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಾಗೂ ಉಳಿದ 5 ಲಕ್ಷ ರೂಪಾಯಿಗಳನ್ನು ಶಿಕ್ಷಣ ಇಲಾಖೆಯ ವತಿಯಿಂದ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಹತ್ಯೆ ನಡೆದ ಬಡಾವಣೆ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮುಂಬರುವ ಜಾತ್ರೆ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.