×
Ad

ಶಾಲೆ ಮೇಲೆ ವೈಮಾನಿಕ ದಾಳಿ ಖಂಡನೀಯ; ಭಾರತೀಯ ನಾಗರಿಕನ್ನು ರಕ್ಷಣೆ ಮಾಡಿ : ಡಿ.ಕೆ.ಶಿವಕುಮಾರ್ ಆಗ್ರಹ

Update: 2026-03-01 17:53 IST

ಬೆಂಗಳೂರು/ ಬಾಳೆಹೊನ್ನೂರು: "ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಈಗ ನಡೆಯುತ್ತಿರುವ ಯುದ್ಧ ಸರಿಯಲ್ಲ. ವೈಮಾನಿಕ ದಾಳಿಯಲ್ಲಿ ಮಕ್ಕಳು ಸತ್ತಿದ್ದಾರೆ. ಏನೂ ಮಾಡದ ಮಕ್ಕಳ ಶಾಲೆ ಮೇಲೆ ಏಕೆ ದಾಳಿ ಮಾಡಬೇಕು. ಇದು ಖಂಡನೀಯ. ದುಬೈ ಸೇರಿದಂತೆ ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಣೆ ಮಾಡಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದರು.

ಸದಾಶಿವನಗರದ ನಿವಾಸದ ಬಳಿ ಹಾಗೂ ಬಾಳೆಹೊನ್ನರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ರವಿವಾರ ಪ್ರತಿಕ್ರಿಯೆ ನೀಡಿದರು.

ಸೌದಿ, ದುಬೈ ಸೇರಿದಂತೆ ಇತರೆಡೆ ಇರುವ ಕನ್ನಡಿಗರ ರಕ್ಷಣೆ ಬಗ್ಗೆ ಕೇಳಿದಾಗ, "ಕರ್ನಾಟಕ, ಕೇರಳ ಸೇರಿದಂತೆ ಭಾರತೀಯ ನಾಗರಿಕರನ್ನ ರಕ್ಷಣೆ ಮಾಡಬೇಕು ಎಂದು ಕೇಂದ್ರ ಸರಕಾರದ ಬಳಿ ಮನವಿ ಮಾಡುತ್ತೇನೆ. ನಾಗರಿಕರ ರಕ್ಷಣೆಗೆ ಏನೂ ಒತ್ತಡ ಹೇರಬೇಕೋ ಆ ಕೆಲಸವನ್ನು ನಾವು ಮಾಡುತ್ತೇವೆ. ಭಾರತೀಯರು, ಕನ್ನಡಿಗರಿಗೆ ಧೈರ್ಯ ತುಂಬುವ ಕೆಲಸ ನಾವು ಮಾಡುತ್ತೇವೆ. ಪ್ರಪಂಚದ ಯಾವ ಮನುಷ್ಯರು ಹೀಗೆ ಸಾಯುವುದನ್ನ ನಾನು ಖಂಡಿಸುತ್ತೇನೆ" ಎಂದರು.

"ದುಬೈನಲ್ಲಿ ನಮ್ಮ ಶಾಸಕರಾದ ಎ.ಸಿ.ಶ್ರೀನಿವಾಸ್, ಭರತ್ ರೆಡ್ಡಿ ಅವರ ಕುಟುಂಬ, ಎಂಎಲ್ ಸಿ ಭೋಜೇಗೌಡ ಅವರು ಸಿಲುಕಿಕೊಂಡಿದ್ದಾರೆ. ಜೊತೆಗೆ ಅನೇಕ ನಾಗರಿಕರು ಸಿಲುಕಿಕೊಂಡಿದ್ದಾರೆ. ಇವರನ್ನೆಲ್ಲಾ ರಕ್ಷಣೆ ಮಾಡಬೇಕು. ದಕ್ಷಿಣ ಭಾರತದ ಅನೇಕರು ದುಬೈ, ಸೌದಿಯಲ್ಲಿದ್ದಾರೆ. ಅನೇಕ ಭಾರತೀಯ ವಿದ್ಯಾಸಂಸ್ಥೆಗಳಿವೆ" ಎಂದರು.

"ಅಲ್ಲಿರುವ ಕನ್ನಡ ಸಂಘಟನೆಗಳು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಅನೇಕ ಪರಿಚಿತರಿಂದ ವ್ಯಾಪಕವಾಗಿ ಕರೆಗಳು ಬರುತ್ತಿವೆ. ನಮ್ಮ ಜೊತೆ ವ್ಯವಹಾರ ನಡೆಸುವವರು, ಪರಿಚಿತರು ಗಾಬರಿಯಾಗಿದ್ದಾರೆ. ಸೌದಿಯಲ್ಲಿ ಏರ್ ಸ್ಟೈಕ್, ಕ್ಷಿಪಣಿಗಳು ಹಾರುತ್ತಿರುವುದು ಕಾಣುತ್ತಿದೆ ಎಂದು ಹೇಳಿದ್ದಾರೆ. ನಾನು ಆತಂಕ ಪಡುವುದು ಬೇಡ ಎಂದು ಹೇಳಿದ್ದೇನೆ" ಎಂದು ತಿಳಿಸಿದರು.

ಬೆಂಗಳೂರಿನವರು ಯಾರಾದರೂ ಸಿಲುಕಿರುವ ಮಾಹಿತಿ ಇದೆಯೇ ಎಂದು ಕೇಳಿದಾಗ, "ಈ ಕಾರಣಕ್ಕೆ ಕಮಿಷನರ್ ಅವರಿಗೆ ಮುಖ್ಯಮಂತ್ರಿಯವರು ಸೇರಿದಂತೆ ನಾವು ನಿರ್ದೇಶನ‌ ನೀಡಿದ್ದೇವೆ" ಎಂದರು.

ಸಹಾಯವಾಣಿ ತೆರೆಯುವ ಇರಾದೆ ಏನಾದರೂ ಇದೆಯೇ ಎಂದು ಕೇಳಿದಾಗ, "ನಾವು ಹಾಗೂ ಕೇಂದ್ರ ಸರಕಾರ ಬೇರೆ, ಬೇರೆಯಾಗಿ ಸಹಾಯವಾಣಿ ತೆರೆಯಲು ಆಗುವುದಿಲ್ಲ. ವಿದೇಶಾಂಗ ಇಲಾಖೆಯಿಂದ ಮಾಡಬೇಕು. ನಾವು ಧೈರ್ಯ ತುಂಬುವಂತಹ ಕೆಲಸ ಮಾಡಬೇಕು" ಎಂದರು.

ಮಾನವ ಧರ್ಮಕ್ಕೆ ಜಯವಾಗಲಿ:

"ಪ್ರಪಂಚದಲ್ಲಿ ಶಾಂತಿ ನೆಲೆಸಬೇಕು. ಯಾವುದೇ ಪ್ರಾಣ ಹಾನಿಯಾಗಬಾರದು ಎಂಬುದು ನಮ್ಮ ಪ್ರಾರ್ಥನೆ. ಮಾನವಧರ್ಮಕ್ಕೆ ಜಯವಾಗಲಿ ಎಂದರು

"ಅಮೇರಿಕಾ ಯುದ್ಧವನ್ನು ನಿಲ್ಲಿಸಬೇಕಿದೆ. ಈ ಯುದ್ಧ ದಿಂದ ಭಾರತಕ್ಕೂ ಗಂಡಾಂತರವಾಗಲಿದೆ. ನಮ್ಮ ಸರಕಾರದಿಂದಲೂ ನಮ್ಮ ಜನರಿಗೆ ಧೈರ್ಯ ತುಂಬುವ ಕೆಲಸವಾಗುತ್ತಿದೆ. ಶಾಂತಿ ಕಾಪಾಡಲು ನಾವೆಲ್ಲರೂ ಮನವಿ ಮಾಡೋಣ" ಎಂದರು.

"ಇಲ್ಲಿ ಕನ್ನಡಿಗರು, ಆ ರಾಜ್ಯದವರು ಎಂದು ಬರುವುದಿಲ್ಲ‌. ನಾವೆಲ್ಲರೂ ಭಾರತೀಯರು. ಏಕೆಂದರೆ ಇಡೀ ಸೌದಿ ದೇಶ ನಡೆಯುತ್ತಿರುವುದೇ ಭಾರತೀಯರಿಂದ. ಅದರಲ್ಲೂ ದಕ್ಷಿಣ ಭಾರತೀಯರು ವೃತ್ತಿಪರವಾಗಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರು, ಕೇರಳ ಭಾಗದಲ್ಲಿ ಕುಟುಂಬದ ಒಬ್ಬರಾದರೂ ಸೌದಿಯಲ್ಲಿ ನೆಲೆಸಿರುತ್ತಾರೆ. ದೇಶವನ್ನು ಬೆಳೆಸುತ್ತಾ ಅವರೂ ಬದುಕುತ್ತಿದ್ದಾರೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News