×
Ad

ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 12ನೇ ತರಗತಿವರೆಗೆ ಉಚಿತ ನೋಟ್‌ಬುಕ್, ಪಠ್ಯಪುಸ್ತಕ : ಮಧು ಬಂಗಾರಪ್ಪ

Update: 2025-12-06 00:03 IST

ಚಿಕ್ಕಮಗಳೂರು : ಮುಂದಿನ ಶೈಕ್ಷಣಿಕ ಸಾಲಿನಿಂದ ಒಂದನೇ ತರಗತಿಯಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ನೋಟ್ ಬುಕ್ ಹಾಗೂ ಪಠ್ಯ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು ಎಂದು ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಕೊಪ್ಪ ತಾಲೂಕಿನ ಮೇಲ್ಪಾಲ್ ಸರಕಾರಿ ಪ್ರೌಢಶಾಲೆಯ ನೂತನ ಕೊಠಡಿಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಈಗಾಗಲೇ ಶೂಗಳು, ಸಾಕ್ಸ್‌ಗಳು ಮತ್ತು ಸಮವಸ್ತ್ರ ನೀಡುವುದರ ಜೊತೆಗೆ ಪಠ್ಯಪುಸ್ತಕ ಹಾಗೂ ನೋಟ್ ಪುಸ್ತಕಗಳನ್ನೂ ನೀಡಲಾಗುತ್ತಿದೆ. 8ನೇ ತರಗತಿಯವರೆಗಿನ ಮಕ್ಕಳಿಗೆ ಒಂದು ಮೊಟ್ಟೆ ಮಾತ್ರ ವಿತರಿಸಲಾಗುತ್ತಿತ್ತು. ಅದನ್ನು ನಮ್ಮ ಸರಕಾರ 10ನೇ ತರಗತಿಯವರೆಗೆ ವಿಸ್ತರಿಸಿದೆ. ಬಡ ಮಕ್ಕಳ ಅಪೌಷ್ಟಿಕತೆ ನೀಗಿಸುವ ಸಲುವಾಗಿ ಬೆಳಗ್ಗೆ ಹಾಲು ಹಾಗೂ ರಾಗಿ ಮಾಲ್ಟ್ ಜೊತೆಗೆ ವಾರವಿಡೀ ಮೊಟ್ಟೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಬಡತನಕ್ಕೆ ಸ್ಪಂದಿಸಿ ಕಾರ್ಯ ನಿರ್ವಹಿಸುವುದೇ ನಮ್ಮ ಸರಕಾರದ ಕೆಲಸ. ಈ ನಿಟ್ಟಿನಲ್ಲಿ 57 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ ಎಂದು ಹೇಳಿದರು.

ಶಿಕ್ಷಕರ ಕೊರತೆ ನೀಗಿಸಲು ನಮ್ಮ ಸರಕಾರ ಅಧಿಕಾರಕ್ಕೆ ಬಂದ 11 ತಿಂಗಳಲ್ಲಿ 13 ಸಾವಿರ ಶಿಕ್ಷಕರ ನೇಮಕ ಮಾಡಲಾಗಿದೆ. ಡಿ.7ರಂದು ಟಿಇಟಿ ಪರೀಕ್ಷೆ ನಡೆಯಲಿದ್ದು, ಮತ್ತೆ 12 ಸಾವಿರ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಈ ಶೈಕ್ಷಣಿಕ ವರ್ಷ ಆರಂಭವಾದ ಸಂದರ್ಭದಲ್ಲೇ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಕಾರ್ಯ ನಡೆದಿದೆ ಎಂದರು.

ರಾಜ್ಯದಲ್ಲಿ ಗ್ರಾಪಂ ವ್ಯಾಪ್ತಿಗೆ ಒಂದರಂತೆ ಇಡೀ ರಾಜ್ಯಕ್ಕೆ 6 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಸ್ಥಾಪಿಸಬೇಕೆಂಬ ಉದ್ದೇಶ ಸರಕಾರದ್ದು. ಜೊತೆಗೆ ಆ ಶಾಲೆಗಳ ವಿದ್ಯಾರ್ಥಿಗಳಿಗೆ ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಉಚಿತ ಬಸ್ ವ್ಯವಸ್ಥೆಯೂ ಲಭ್ಯವಿರುತ್ತದೆ ಎಂದು ತಿಳಿಸಿದರು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸುಮಾರು 45 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಗ್ರಾಪಂ ಕಟ್ಟಡ, ಸುಮಾರು 10 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡ, 82 ಲಕ್ಷ ರೂ.ಗಳ ವೆಚ್ಚದಲ್ಲಿ ಐದು ಶಾಲಾ ಕೊಠಡಿಗಳನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉದ್ಘಾಟಿಸಿದ್ದಾರೆ. ಸಚಿವ ಮಧು ಬಂಗಾರಪ್ಪನವರು ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದಾರೆ. ಇಂದು ಖಾಸಗಿ ಉದ್ಯಮಿಗಳು ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡಲು ಮುಂದೆ ಬರಲು ಸಿದ್ಧರಿದ್ದಾರೆ. ಅದರಲ್ಲೂ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಹಯೋಗದಲ್ಲಿ ಸುಮಾರು 1,560 ಕೋಟಿ ರೂ.ಗಳ ಆರ್ಥಿಕ ನೆರವು ತಂದಿದ್ದು, ವಾರದಲ್ಲಿ ಆರು ದಿನಗಳ ಕಾಲ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಹಾಗೂ ರಾಗಿ ಮಾಲ್ಟ್ ನೀಡುವ ಯೋಜನೆ ರೂಪಿಸಲಾಗಿದೆ. ಇದು ಮಧು ಬಂಗಾರಪ್ಪ ಅವರ ಪ್ರಯತ್ನದಿಂದ ಆಗಿದೆ ಎಂದರು.

ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಕೇಶವತ್ತಿ, ಉಪಾಧ್ಯಕ್ಷೆ ಆಶಾಲತಾ, ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಮ್ಮರಾಜು, ಗ್ರಾಪಂ ಸದಸ್ಯರು ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News