ಮಹಾರಾಷ್ಟ್ರ ಸರಕಾರದ ಮಲತಾಯಿ ಧೋರಣೆಗೆ ಚಿರಾಗ್ ಶೆಟ್ಟಿ ಆಕ್ರೋಶ
ಜೈಪುರ: ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಭಾರತದ ನಾಲ್ವರು ಕ್ರಿಕೆಟಿಗರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಹಾಗೂ ಯಶಸ್ವಿ ಜೈಸ್ವಾಲ್ ಗೆ ಮಹಾರಾಷ್ಟ್ರ ಸರಕಾರ ಕಳೆದ ವಾರ ಸನ್ಮಾನಿಸಿತ್ತು. 2022ರ ಥಾಮಸ್ ಕಪ್ ವಿಜೇತ ಭಾರತೀಯ ತಂಡದಲ್ಲಿದ್ದ ನನ್ನನ್ನು ಗೌರವಿಸದೆ ಇರುವುದನ್ನು ಉಲ್ಲೇಖಿಸಿದ ಭಾರತದ ಶಟ್ಲರ್ ಚಿರಾಗ್ ಶೆಟ್ಟಿ, ಕ್ರೀಡೆಗಳನ್ನು ಸಮಾನವಾಗಿ ಕಾಣದೆ ಮಲತಾಯಿ ಧೋರಣೆ ತಳೆದಿರುವ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2022ರಲ್ಲಿ ಭಾರತವು ಐತಿಹಾಸಿಕ ಥಾಮಸ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದವರ ಪೈಕಿ ಒಬ್ಬರಾಗಿರುವ ಚಿರಾಗ್, ಬ್ಯಾಂಕಾಕ್ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡ ಇಂಡೋನೇಶ್ಯವನ್ನು 3-0 ಅಂತರದಿಂದ ಮಣಿಸಿ ಪ್ರತಿಷ್ಠಿತ ಟೀಮ್ ಚಾಂಪಿಯನ್ಶಿಪ್ ಗೆದ್ದ ನಂತರ ರಾಜ್ಯ ಸರಕಾರವು ತನ್ನ ಸಾಧನೆಯನ್ನು ಕಡೆಗಣಿಸಿದ್ದಕ್ಕೆ ವಾಗ್ದಾಳಿ ನಡೆಸಿದರು.
ಥಾಮಸ್ ಕಪ್ ವಿಶ್ವಕಪ್ ಗೆದ್ದಷ್ಟೇ ಸಮಾನವಾಗಿದೆ. ನಾನು ಫೈನಲ್ನಲ್ಲಿ ಚಾಂಪಿಯನ್ ಇಂಡೋನೇಶ್ಯಕ್ಕೆ ಶಾಕ್ ನೀಡಿ ತನ್ನ ಚೊಚ್ಚಲ ಪ್ರಶಸ್ತಿ ಜಯಿಸಿದ್ದ ಭಾರತೀಯ ಬ್ಯಾಡ್ಮಿಂಟನ್ ತಂಡದ ಭಾಗವಾಗಿದ್ದೆ. ನಾನು ಭಾರತೀಯ ತಂಡದಲ್ಲಿದ್ದ ಮಹಾರಾಷ್ಟ್ರದ ಏಕೈಕ ಆಟಗಾರನಾಗಿದ್ದೆ. ಸರಕಾರವು ವಿಶ್ವಕಪ್ ವಿಜೇತ ಕ್ರಿಕೆಟ್ ತಾರೆಯರನ್ನು ಗೌರವಿಸುವಾಗ ನನ್ನ ಪ್ರಯತ್ನವನ್ನು ಗುರುತಿಸಬೇಕಾಗಿತ್ತು. ಸರಕಾರವು ಇತರ ಎಲ್ಲ ಕ್ರೀಡೆಯನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಚಿರಾಗ್ ಹೇಳಿದ್ದಾರೆ.
ಮುಂಬೈನ ಚಿರಾಗ್ ಅವರು ಸದ್ಯ ಹೈದರಾಬಾದ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ತನ್ನ ಡಬಲ್ಸ್ ಜೊತೆಗಾರ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿಯ ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ತಯಾರಿ ನಡೆಸುತ್ತಿದ್ದಾರೆ. ಚಿರಾಗ್ ಕಳೆದ ವರ್ಷ ಸಾತ್ವಿಕ್ ಸಾಯಿರಾಜ್ರೊಂದಿಗೆ ಬಿಡಬ್ಲ್ಯು ಎಫ್ ಪುರುಷರ ಡಬಲ್ಸ್ ರ್ಯಾಂಕಿಂಗ್ನಲ್ಲಿ ವಿಶ್ವದ ನಂ.1 ಕಿರೀಟ ಧರಿಸಿದ್ದರು.
ನಾನು ಕ್ರಿಕೆಟ್ ವಿರೋಧಿಯಲ್ಲ. ನಾವು ಎಲ್ಲ ಬ್ಯಾಡ್ಮಿಂಟನ್ ಆಟಗಾರರು ಟಿ20 ವಿಶ್ವಕಪ್ ಫೈನಲ್ ಅನ್ನು ಟಿವಿಯಲ್ಲಿ ನೋಡಿದ್ದೇವೆ. ಗೆಲುವನ್ನು ಉತ್ಸಾಹದಿಂದ ಸಂಭ್ರಮಿಸಿದ್ದೇವೆ. ಭಾರತವು ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಸಾಧಿಸಿದ್ದಕ್ಕೆ ನಮಗೆ ಖುಷಿಯಾಗಿದೆ. ನಾವು ಕೂಡ ಕೆಲವು ವರ್ಷಗಳ ಹಿಂದೆ ಮಹತ್ವದ ಸಾಧನೆ ಮಾಡಿದ್ದೆವು. ಆದರೆ ರಾಜ್ಯ ಸರಕಾರವು ನನ್ನನ್ನು ಗೌರವಿಸಲಿಲ್ಲ, ಯಾವುದೇ ನಗದು ಬಹುಮಾನ ನೀಡಲಿಲ್ಲ. ಭಾರತೀಯ ಬ್ಯಾಡ್ಮಿಂಟನ್ ತಂಡ ಥಾಮಸ್ ಕಪ್ನಲ್ಲಿ 2022ಕ್ಕಿಂತ ಮೊದಲು ಸೆಮಿ ಫೈನಲ್ಗೆ ತಲುಪಿರಲಿಲ್ಲ. ಆದರೆ ನಾವು ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಿದ್ದೆವು ಎಂದು ಖೇಲ್ರತ್ನ ಪ್ರಶಸ್ತಿ ಪುರಸ್ಕೃತ ಚಿರಾಗ್ ಶೆಟ್ಟ್ಟಿ ಹೇಳಿದ್ದಾರೆ.