3ನೇ ಟಿ20 ಪಂದ್ಯ | ವಿಂಡೀಸ್ ವಿರುದ್ಧ ಕಿವೀಸ್ ಗೆ 9 ರನ್ ಜಯ
ಆತಿಥೇಯರಿಗೆ ಸರಣಿ ಮುನ್ನಡೆ
PC : NDTV
ನೆಲ್ಸನ್ (ನ್ಯೂಝಿಲ್ಯಾಂಡ್), ನ. 9: ಅಂತಿಮ ಓವರ್ ನಲ್ಲಿ ವೇಗಿ ಕೈಲ್ ಜೇಮೀಸನ್ ದೃಢಚಿತ್ತದಿಂದ ನಡೆಸಿದ ಬೌಲಿಂಗ್ ನೆರವಿನಿಂದ ರವಿವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯವನ್ನು ಆತಿಥೇಯ ನ್ಯೂಝಿಲ್ಯಾಂಡ್ ಒಂಭತ್ತು ರನ್ ಗಳಿಂದ ಗೆದ್ದಿದೆ.
ನೆಲ್ಸನ್‌ನ ಸ್ಯಾಕ್ಸ್‌ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ, ಗೆಲ್ಲಲು 178 ರನ್ ಗಳ ಗುರಿಯನ್ನು ಪಡೆದ ಪ್ರವಾಸಿ ವೆಸ್ಟ್ ಇಂಡೀಸ್ ಒಂದು ಹಂತದಲ್ಲಿ ಗುರಿಯನ್ನು ತಲುಪುವ ಸ್ಪಷ್ಟ ಸೂಚನೆಯನ್ನು ನೀಡಿತ್ತು. ಆದರೆ ರೊಮಾರಿಯೊ ಶೆಫರ್ಡ್ ಕೊನೆಯ ಎರಡನೇ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಬಳಿಕ ಅದು 168 ರನ್ ಗಳಿಗೆ ತನ್ನ ಇನಿಂಗ್ಸನ್ನು ಮುಕ್ತಾಯಗೊಳಿಸಿತು.
ಈ ವಿಜಯದೊಂದಿಗೆ, ಐದು ಪಂದ್ಯಗಳ ಸರಣಿಯಲ್ಲಿ ನ್ಯೂಝಿಲ್ಯಾಂಡ್ 2-1ರ ಮುನ್ನಡೆ ಗಳಿಸಿದೆ.
ಹದಿಮೂರನೇ ಓವರ್ ನಲ್ಲಿ ವೆಸ್ಟ್ ಇಂಡೀಸ್ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 88 ರನ್ ಗಳನ್ನು ಗಳಿಸಿತ್ತು. ಆಗ ಜೊತೆಯಾದ ಶೆಫರ್ಡ್ ಮತ್ತು ವೇಗಿ ಶಮರ್ ಸ್ಪ್ರಿಂಗರ್ (20 ಎಸೆತಗಳಲ್ಲಿ 39 ರನ್) ಒಳ್ಳೆಯ ಜೊತೆಯಾಟವೊಂದನ್ನು ಪ್ರಸ್ತುತಪಡಿಸಿದರು. ಅವರು ಒಂಭತ್ತನೇ ವಿಕೆಟ್ ಗೆ ಕೇವಲ 39 ಎಸೆತಗಳಲ್ಲಿ 78 ರನ್ ಗಳನ್ನು ಸೇರಿಸಿದರು.
ಶೆಫರ್ಡ್ 34 ಎಸೆತಗಳಲ್ಲಿ 49 ರನ್ ಗಳನ್ನು ಗಳಿಸಿ ನಿರಾಶೆಯಿಂದ ನಿರ್ಗಮಿಸಿದರು.
ಆರಂಭಿಕ ಆಟಗರ ಆ್ಯಲಿಕ್ ಆತನೇಝ್ 31 ಮತ್ತು ಅಕೀಮ್ ಆಗಸ್ಟ್ 24 ರನ್ ಗಳ ದೇಣಿಗೆ ನೀಡಿದರು.
ಜಾಕೋಬ್ ಡಫಿ ಮತ್ತು ಇಶ್ ಸೋದಿ ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಇಶ್ ಸೋದಿಯನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಇದಕ್ಕೂ ಮೊದಲು, ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 177 ರನ್ ಗಳನ್ನು ಗಳಿಸಿತು.
ಆರಂಭಿಕ ಬ್ಯಾಟರ್ ಡೇವನ್ ಕಾನ್ವೇ 56, ಟಿಮ್ ರಾಬಿನ್ಸನ್ 23, ರಚಿನ್ ರವೀಂದ್ರ 26, ಡ್ಯಾರಿಲ್ ಮಿಚೆಲ್ 41 ರನ್ ಗಳ ದೇಣಿಗೆ ನೀಡಿದರು.
ವೆಸ್ಟ್ ಇಂಡೀಸ್ ಪರವಾಗಿ ಮ್ಯಾಥ್ಯೂ ಫೋರ್ಡ್ ಮತ್ತು ಜಾಸನ್ ಹೋಲ್ಡರ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು.