×
Ad

ಮುಹಮ್ಮದ್ ಶಮಿ ಎಲ್ಲಿದ್ದಾರೆ, ಅವರೇಕೆ ಆಡುತ್ತಿಲ್ಲ?: ಹರ್ಭಜನ್ ಸಿಂಗ್ ಪ್ರಶ್ನೆ

Update: 2025-12-04 22:22 IST

ಮುಹಮ್ಮದ್ ಶಮಿ | Photo Credit : PTI 

ಹೊಸದಿಲ್ಲಿ: ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅನುಪಸ್ಥಿತಿಯಲ್ಲೂ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್‌ಗೆ ವಿನಂತಿಸಿರುವ ಲೆಜೆಂಡರಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಮುಹಮ್ಮದ್ ಶಮಿ ಎಲ್ಲಿದ್ದಾರೆ?, ಅವರು ಏಕೆ ಆಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಬುಧವಾರ 359 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿ ಇತಿಹಾಸ ನಿರ್ಮಿಸಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು.

ಭಾರತದ ಬೌಲರ್‌ಗಳು ಲೈನ್ ಹಾಗೂ ಲೆಂಗ್ತ್‌ನಲ್ಲಿ ಶಿಸ್ತು ಕಾಯ್ದುಕೊಳ್ಳಲು ಪರದಾಟ ನಡೆಸಿದ್ದರು. ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವೇಳೆ ಇಬ್ಬನಿ ಪ್ರಮುಖ ಪಾತ್ರವಹಿಸಿತ್ತು.

ಕುಲದೀಪ್ ಯಾದವ್, ವಾಶಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜ ಅವರ ಸ್ಪಿನ್ ದಾಳಿಯು ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಿಗೆ ಸಮಸ್ಯೆಯಾಗಿ ಕಾಡಲಿಲ್ಲ. ವೇಗದ ಬೌಲರ್‌ಗಳಾದ ಹರ್ಷಿತ್ ರಾಣಾ ಹಾಗೂ ಪ್ರಸಿದ್ಧ ಕೃಷ್ಣ ದುಬಾರಿ ಎನಿಸಿಕೊಂಡಿದ್ದರು.

‘‘ಶಮಿ ಎಲ್ಲಿದ್ದಾರೆ? ಅವರು ಏಕೆ ಆಡುತ್ತಿಲ್ಲ ಎಂದು ನನಗೆ ಗೊತ್ತಿಲ್ಲ. ಪ್ರಸಿದ್ಧ ಕೃಷ್ಣ ಉತ್ತಮ ಬೌಲರ್. ಆದರೆ ಅವರು ಇನ್ನಷ್ಟು ಪಾಠ ಕಲಿಯಬೇಕಾಗಿದೆ. ನಮ್ಮಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ಅವರನ್ನು ನಿಧಾನವಾಗಿ ಮೂಲೆಗುಂಪು ಮಾಡಲಾಗುತ್ತದೆ. ಬುಮ್ರಾ ಇದ್ದರೆ ಇದೊಂದು ವಿಭಿನ್ನ ಬೌಲಿಂಗ್ ದಾಳಿಯಾಗಿರುತ್ತದೆ. ಬುಮ್ರಾ ಇಲ್ಲದಿದ್ದರೆ ಸಂಪೂರ್ಣ ಬೇರೆಯಾಗಿರುತ್ತದೆ. ಬುಮ್ರಾ ಇಲ್ಲದೆ ಪಂದ್ಯಗಳನ್ನು ಗೆಲ್ಲುವ ಕಲೆ ಸಿದ್ದಿಸಿಕೊಳ್ಳಬೇಕಾಗಿದೆ’’ ಎಂದು ಹರ್ಭಜನ್ ಹೇಳಿದ್ದಾರೆ.

ಏಕದಿನ ತಂಡಕ್ಕೆ ವರುಣ್ ಚಕ್ರವರ್ತಿಯನ್ನು ಸೇರಿಸಿಕೊಳ್ಳಬೇಕೆಂದು ಆಯ್ಕೆಗಾರರಿಗೆ ಸಲಹೆ ನೀಡಿದ ಹರ್ಭಜನ್,‘‘ಇಂಗ್ಲೆಂಡ್‌ನಲ್ಲಿ ಬುಮ್ರಾ ಅನುಪಸ್ಥಿತಿಯಲ್ಲಿ ಮುಹಮ್ಮದ್ ಸಿರಾಜ್ ನಂಬಲಸಾಧ್ಯ, ಅಮೋಘ ಪ್ರದರ್ಶನ ನೀಡಿದ್ದರು. ಬುಮ್ರಾ ಇಲ್ಲದ ಎಲ್ಲ ಟೆಸ್ಟ್ ಪಂದ್ಯಗಳನ್ನು ಭಾರತ ತಂಡ ಗೆದ್ದಿತ್ತು. ಸೀಮಿತ ಓವರ್ ಪಂದ್ಯಗಳಲ್ಲೂ ವೇಗದ ಬೌಲಿಂಗ್ ಇಲ್ಲವೇ ಸ್ಪಿನ್ ವಿಭಾಗದಲ್ಲಿ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲ ಬೌಲರ್‌ಗಳನ್ನು ಹುಡುಕಬೇಕಾಗಿದೆ. ಈಗಾಗಲೇ ಟಿ20 ಪಂದ್ಯಗಳಲ್ಲಿ ಆಡುತ್ತಿರುವ ವರುಣ್ ಚಕ್ರವರ್ತಿಯನ್ನು ಏಕದಿನ ತಂಡದಲ್ಲೂ ಸೇರಿಸಿಕೊಳ್ಳಬೇಕು’’ ಎಂದು ಹರ್ಭಜನ್ ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News