ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಎಡಗೈ ವೇಗಿ ಆಗಿ ಹೊರಹೊಮ್ಮಿದ ಮಿಚೆಲ್ ಸ್ಟಾರ್ಕ್
ಪಾಕಿಸ್ತಾನದ ಲೆಜೆಂಡ್ ವಸೀಂ ಅಕ್ರಂ ದಾಖಲೆ ಮುರಿದ ಆಸ್ಟ್ರೇಲಿಯದ ವೇಗಿ
ಮಿಚೆಲ್ ಸ್ಟಾರ್ಕ್ | Photo Credit ; AP \ PTI
ಬ್ರಿಸ್ಬೇನ್: ಟೆಸ್ಟ್ ಕ್ರಿಕೆಟಿನ ಅತ್ಯಂತ ಯಶಸ್ವಿ ಎಡಗೈ ವೇಗದ ಬೌಲರ್ ಆಗಿ ಹೊರಹೊಮ್ಮಿರುವ ಆಸ್ಟ್ರೇಲಿಯದ ಮಿಚೆಲ್ ಸ್ಟಾರ್ಕ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಗುರುವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ವಿಕೆಟನ್ನು ಉರುಳಿಸಿದ ಆಸ್ಟ್ರೇಲಿಯದ ವೇಗದ ಬೌಲರ್ ಸ್ಟಾರ್ಕ್ ಪಾಕಿಸ್ತಾನದ ಲೆಜೆಂಡ್ ವಸೀಂ ಅಕ್ರಂ ದಾಖಲೆ (414 ವಿಕೆಟ್‌ಗಳು)ಯನ್ನು ಮುರಿದರು.
ಎರಡನೇ ಟೆಸ್ಟ್ ಪಂದ್ಯದಲ್ಲಿ 19 ಓವರ್‌ಗಳ ಬೌಲಿಂಗ್ ಮಾಡಿರುವ ಸ್ಟಾರ್ಕ್ 71 ರನ್ ನೀಡಿ 6 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.
14 ವರ್ಷಗಳ ಹಿಂದೆ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಮೈದಾನದಲ್ಲೇ 35ರ ವಯಸ್ಸಿನ ಸ್ಟಾರ್ಕ್ ಅವರು ಅಕ್ರಂ ಅವರ ದೀರ್ಘಕಾಲದ ದಾಖಲೆಯನ್ನು ಮುರಿದು ವಿಶೇಷ ಸಾಧನೆ ಮಾಡಿದರು. ಅಕ್ರಂ ಅವರು ಟೆಸ್ಟ್ ಕ್ರಿಕೆಟ್ ಕಂಡ ಅತ್ಯಂತ ಪರಿಪೂರ್ಣ ಎಡಗೈ ವೇಗದ ಬೌಲರ್ ಎಂದೇ ಖ್ಯಾತಿ ಪಡೆದಿದ್ದಾರೆ.
ಸ್ಟಾರ್ಕ್ ತನ್ನ 102ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಅಕ್ರಂ 104 ಪಂದ್ಯಗಳಲ್ಲಿ ಒಟ್ಟು 414 ವಿಕೆಟ್‌ಗಳನ್ನು ಉರುಳಿಸಿದ್ದರು. ಕಳೆದ ವಾರ ಪರ್ತ್‌ನಲ್ಲಿ ನಡೆದಿದ್ದ ಮೊದಲ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ 58 ರನ್‌ಗೆ 7 ವಿಕೆಟ್‌ಗಳನ್ನು ಕಬಳಿಸಿದ್ದ ಸ್ಟಾರ್ಕ್ ಅವರು ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.
ಈ ಸಾಧನೆಯ ಮೂಲಕ ಸ್ಟಾರ್ಕ್ ಅವರು ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ 16ನೇ ಸ್ಥಾನ ಪಡೆದಿದ್ದಾರೆ. ಶಾನ್ ಪೊಲ್ಲಾಕ್(421), ರಿಚರ್ಡ್ ಹ್ಯಾಡ್ಲೀ(431) ಹಾಗೂ ಹರ್ಭಜನ್ ಸಿಂಗ್(417)ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್: ಗರಿಷ್ಠ ವಿಕೆಟ್‌ಗಳನ್ನು ಪಡೆದ ಎಡಗೈ ವೇಗಿಗಳು
418-ಮಿಚೆಲ್ ಸ್ಟಾರ್ಕ್
414-ವಸೀಂ ಅಕ್ರಂ
355-ಚಾಮಿಂಡ ವಾಸ್
317-ಟ್ರೆಂಟ್ ಬೌಲ್ಟ್
311-ಝಹೀರ್ ಖಾನ್