ಭಾರತ-ಇಂಗ್ಲೆಂಡ್ ಮೂರನೆ ಟೆಸ್ಟ್: ಭಾರತಕ್ಕೆ ಆರಂಭಿಕ ಆಘಾತ
Photo:X/BCCI
ಸೌರಾಷ್ಟ್ರ: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಮೂರನೆ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಮೂರು ವಿಕೆಟ್ ನಷ್ಟಕ್ಕೆ 93 ರನ್ ಕಲೆ ಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಆರಂಭಿಕ ಆಘಾತಕ್ಕೆ ಈಡಾಯಿತು. ತಂಡದ ಮೊತ್ತ ಕೇವಲ 22 ರನ್ ಆಗಿದ್ದಾಗ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೇವಲ 10 ರನ್ ಗಳಿಸಿ, ಮಾರ್ಕ್ ವುಡ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬ್ಯಾಟಿಂಗ್‌ಗೆ ಬಂದ ಶುಭಮನ್ ಗಿಲ್ ಒಂಬತ್ತು ಎಸೆತಗಳನ್ನು ಎದುರಿಸಿದರೂ, ಯಾವುದೇ ರನ್ ಗಳಿಸದೆ ಮಾರ್ಕ್ ವುಡ್ ಬೌಲಿಂಗ್‌ನಲ್ಲಿ ಬೆನ್ ಫೋಕ್ಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ತಂಡದ ಮೊತ್ತವು ಕೇವಲ 24 ರನ್ ಆಗಿತ್ತು.
ನಾಲ್ಕನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಪಾಟಿದಾರ್ ಕೂಡಾ ಲಯ ಕಂಡುಕೊಳ್ಳಲು ಸಾಧ್ಯವಾಗದೆ ಕೇವಲ 5 ರನ್ ಗಳಿಸಿದ್ದಾಗ ಟಾಮ್ ಹಾರ್ಟ್ಲಿ ಬೌಲಿಂಗ್‌ನಲ್ಲಿ ಬೆನ್ ಡಕೆಟ್‌ಗೆ ಕ್ಯಾಚಿತ್ತು ಔಟಾದರು.
ಆರಂಭಿಕ ಕ್ರಮಾಂಕದ ಆಟಗಾರರು ಕ್ರೀಸ್‌ಗೆ ಕಚ್ಚಿಕೊಳ್ಳಲು ವಿಫಲವಾಗಿ ಒಬ್ಬರ ನಂತರ ಒಬ್ಬರು ಪೆವಿಲಿಯನ್‌ಗೆ ನಿರ್ಗಮಿಸಿದರೂ ಮತ್ತೊಂದು ತುದಿಯಲ್ಲಿದ್ದ ನಾಯಕ ರೋಹಿತ್ ಶರ್ಮ (ಅಜೇಯ 52) ತಾಳ್ಮೆ ಹಾಗೂ ಆಕ್ರಮಣ ಮಿಶ್ರಿತ ಆಟದೊಂದಿಗೆ ಅರ್ಧ ಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ರವೀಂದ್ರ ಜಡೇಜಾ(24)ರೊಂದಿಗೆ ಮುರಿಯದ ನಾಲ್ಕನೆ ವಿಕೆಟ್‌ಗೆ ಅವರು 60 ರನ್ ಪೇರಿಸಿದ್ದಾರೆ.