Photo Credit : indiatoday.in

ಹೊಸದಿಲ್ಲಿ, ಅ. 14: ಆರ್ಥಿಕ ಅವ್ಯವಹಾರಗಳು, ತನಿಖೆಗೆ ಸಹಕರಿಸದಿರುವುದು ಹಾಗೂ ಅಧಿಕಾರ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಭಾರತದ ಬಾಕ್ಸಿಂಗ್ ಒಕ್ಕೂಟ (BFI) ತನ್ನ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಕುಮಾರ್ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಯುತ್ತಿರುವಾಗಲೇ BFI ಅಧ್ಯಕ್ಷ ಅಜಯ್ ಸಿಂಗ್ ಮಂಗಳವಾರ ಈ ಅಮಾನತು ಆದೇಶವನ್ನು ಹೊರಡಿಸಿದರು.

ಅಗತ್ಯ ಅನುಮೋದನೆ ಇಲ್ಲದೆ ಪ್ರಸಾರ ಸಂಸ್ಥೆಗೆ ಕೆಲಸದ ಆದೇಶ ನೀಡಿರುವುದು, ರಾಷ್ಟ್ರೀಯ ಚಾಂಪಿಯನ್ಷಿಪ್ ರದ್ದತಿಗೆ ಸಂಬಂಧಿಸಿದ ತನಿಖೆಗೆ ಸಹಕರಿಸದಿರುವುದು ಹಾಗೂ ಅಜಯ್ ಸಿಂಗ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅನಧಿಕೃತ ಸಭೆ ಕರೆಯಲು ಪ್ರಯತ್ನಿಸಿರುವುದು ಕುಮಾರ್ ಮೇಲಿರುವ ಇತರ ಆರೋಪಗಳಾಗಿವೆ.

ಪ್ರಧಾನಿ ಮೋದಿಗೆ ಕುಮಾರ್ ಪತ್ರ ಬರೆದ ಬೆನ್ನಿಗೇ ಅಮಾನತು

ಅಜಯ್ ಸಿಂಗ್ ಹಾಗೂ BFI ಕಾರ್ಯನಿರ್ವಾಹಕ ನಿರ್ದೇಶಕ ಕರ್ನಲ್ ಅರುಣ್ ಮಲಿಕ್ ವಿರುದ್ಧ ‘ಕ್ರಿಮಿನಲ್ ಬೆದರಿಕೆ’ ಆರೋಪ ಹೊರಿಸಿ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮಲಿಕ್ ಈ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor