ಸುರಕ್ಷತೆಯ ಖಾತ್ರಿ ಸಿಕ್ಕರೆ ಬಾಂಗ್ಲಾದೇಶಕ್ಕೆ ಮರಳಲು ಸಿದ್ಧ: ಶಕೀಬ್ ಅಲ್ ಹಸನ್
ಶಕೀಬ್ ಅಲ್ ಹಸನ್ | Photo Credit : PTI
ಢಾಕಾ, ಆ. 7: ಸರಕಾರವು ನನ್ನ ಸುರಕ್ಷತೆಯ ಖಾತರಿ ನೀಡಿದರೆ ಎರಡು ವರ್ಷಗಳ ದೇಶಭ್ರಷ್ಟ ಜೀವನದಿಂದ ಹಿಂತಿರುಗಲು ಸಿದ್ಧನಿದ್ದೇನೆ ಎಂದು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಬೆಂಬಲಿಗನಾಗಿರುವ ಬಾಂಗ್ಲಾದೇಶದ ಕ್ರಿಕೆಟ್ ದಿಗ್ಗಜ ಶಕೀಬ್ ಅಲ್ ಹಸನ್ ಹೇಳಿದ್ದಾರೆ. ವಾಪಸಾದ ಬಳಿಕ, ಕೊಲೆ ಸೇರಿದಂತೆ ಇತರ ಆರೋಪಗಳ ಮೇಲಿನ ವಿಚಾರಣೆಯನ್ನು ಎದುರಿಸುವುದಾಗಿ ಅವರು ಹೇಳಿದ್ದಾರೆ ಹಾಗೂ ವಿದಾಯ ಕ್ರಿಕೆಟ್ ಸರಣಿಯೊಂದರಲ್ಲಿ ಆಡುವ ಇಚ್ಛೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.
2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಬಂಡಾಯದ ಬಳಿಕ, ಶೇಖ್ ಹಸೀನಾ ಸರಕಾರ ಪತನಗೊಂಡಿತ್ತು. ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಮಾಜಿ ಸಂಸದರಾಗಿರುವ ಶಕೀಬ್, ಸರಕಾರ ಪತನಗೊಂಡಂದಿನಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.
39 ವರ್ಷ ವಯಸ್ಸಿನ ಈ ಆಟಗಾರ ಈವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿಲ್ಲ. ತನ್ನ ತಾಯ್ನಾಡಿನಲ್ಲಿ ವಿದಾಯದ ಸರಣಿಯೊಂದನ್ನು ಆಡುವ ಮತ್ತು 2027ರ ಏಕದಿನ ವಿಶ್ವಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಭರವಸೆ ತನಗಿನ್ನೂ ಇದೆ ಎಂದು ಅವರು ಹೇಳಿದ್ದಾರೆ.
‘‘ನನ್ನ ಭದ್ರತೆಯನ್ನು ಖಾತರಿಪಡಿಸಲಾಗುವುದು ಎಂಬ ಭರವಸೆ ಸರಕಾರದಿಂದ ಸಿಕ್ಕರೆ, ದೇಶಕ್ಕೆ ಹಿಂತಿರುಗಲು, ನ್ಯಾಯಾಲಯದ ವಿಚಾರಣೆ ಎದುರಿಸಲು ಹಾಗೂ ಮಾಡಬೇಕಾದ ಪ್ರತಿಯೊಂದನ್ನೂ ಮಾಡಲು ಸಿದ್ಧನಿದ್ದೇನೆ’’ ಎಂದು ಶ್ರೀಲಂಕಾದಲ್ಲಿ ಫ್ರಾಂಚೈಸಿ ಕ್ರಿಕೆಟ್ ಆಡುತ್ತಿರುವ ಶಕೀಬ್ ‘ರಾಯ್ಟರ್ಸ್’ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.