ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 500ಕ್ಕೂ ಅಧಿಕ ಕೋಚಿಂಗ್ ಹುದ್ದೆ ಖಾಲಿ : ಭರ್ತಿಗೆ ಕೇಂದ್ರ ಸರಕಾರ ಪ್ರಯತ್ನ
ಮನ್ಸುಖ್ ಮಾಂಡವಿಯ | Photo Credit : PTI
ಹೊಸದಿಲ್ಲಿ, ಆ.6: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ(ಎಸ್‌ಎಐ)ಖಾಲಿ ಇರುವ 500ಕ್ಕೂ ಅಧಿಕ ಕೋಚಿಂಗ್ ಹುದ್ದೆಗಳು, ತಳಮಟ್ಟದಲ್ಲಿ ಡೋಪಿಂಗ್ ಪರೀಕ್ಷೆಗಳ ಹೆಚ್ಚಳ ಹಾಗೂ ಫುಟ್ಬಾಲ್ ರಾಷ್ಟ್ರೀಯ ಸಂಸ್ಥೆಗೆ ಒದಗಿಸಲಾದ ನಿಧಿಗಳ ಬಗ್ಗೆ ಗುರುವಾರ ರಾಜ್ಯಸಭೆಯಲ್ಲಿ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯ ಉತ್ತರಿಸಿದ್ದಾರೆ.
350ಕ್ಕೂ ಹೆಚ್ಚು ಸಹಾಯಕ ತರಬೇತುದಾರರನ್ನು ನೇಮಿಸಿಕೊಳ್ಳಲು ಜನವರಿಯಲ್ಲಿ ಎಸ್‌ಎಐ ಮೆಗಾ ನೇಮಕಾತಿ ಅಭಿಯಾನವನ್ನು ಆರಂಭಿಸಿದ್ದರೂ 464 ಹುದ್ದೆಗಳು ಈಗಲೂ ಖಾಲಿಯಾಗಿವೆೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.
ದೇಶಾದ್ಯಂತವಿರುವ ಎಸ್‌ಎಐ ಕೇಂದ್ರಗಳಲ್ಲಿ 90 ಮುಖ್ಯ ತರಬೇತುದಾರರು ಸಹಿತ 554 ಹುದ್ದೆಗಳು ಭರ್ತಿಗಾಗಿ ಕಾಯುತ್ತಿವೆ.
ನಿಗದಿತ ನೇಮಕಾತಿ ಮಾನದಂಡಗಳಿಗೆ ಅನುಗುಣವಾಗಿ ತರಬೇತುದಾರರ ಅರ್ಹತೆಗಳು ಹಾಗೂ ಸಾಮರ್ಥ್ಯಗಳನ್ನು ನಿರ್ಣಯಿಸಲಾಗುತ್ತದೆ ಎಂದು ಮಾಂಡವಿಯ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ತರಬೇತುದಾರರ ವೃತ್ತಿಪರ ಸಾಮರ್ಥ್ಯಗಳನ್ನು ಹೆಚ್ಚಿಸಲು ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗಾಗಿ 8.5 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಂಡವಿಯ ಬಹಿರಂಗಪಡಿಸಿದರು.
‘‘ಕಳೆದ ಐದು ವರ್ಷಗಳಲ್ಲಿ ಸರಕಾರವು ಫುಟ್ಬಾಲ್‌ಗೆ 37.98 ಕೋಟಿ ರೂ.ಗಳಷ್ಟು ಆರ್ಥಿಕ ನೆರವು ನೀಡಿದೆ. ಈ ವರ್ಷ ಅಖಿಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ(ಎಐಎಫ್‌ಎಫ್)ಒಟ್ಟು 8 ಕೋ.ರೂ.ಗಳಿಂದ 3.91 ಕೋ.ರೂ. ನೀಡಲಾಗಿದೆ. ಸದ್ಯ ದೇಶಾದ್ಯಂತವಿರುವ ವಿವಿಧ ಎಸ್‌ಎಐ ಕೇಂದ್ರಗಳಲ್ಲಿ 527 ಫುಟ್ಬಾಲ್ ಪಟುಗಳಿಗೆ ತರಬೇತಿ ನೀಡಲಾಗುತ್ತಿದೆ’’ಎಂದು ಮಾಂಡವಿಯ ಹೇಳಿದರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ಮಾಂಡವಿಯ ಲಿಖಿತ ಉತ್ತರ ನೀಡಿದರು.