Thailand | ಪಂದ್ಯದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಮೃತ್ಯು

Update: 2026-08-06 22:25 IST

 ಸಾಫ್ಟ್ವಾನ್ ಅವೇ | Photo Credit : X 

ಬ್ಯಾಂಕಾಕ್, ಆ.6: ದಕ್ಷಿಣ ಥಾಯ್ಲೆಂಡ್‌ನಲ್ಲಿ ನಡೆದ ಸ್ಥಳೀಯ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು 24ರ ವಯಸ್ಸಿನ ಆಟಗಾರ ಸಾಫ್ಟ್ವಾನ್ ಅವೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮಳೆಯ ನಡುವೆ ಫುಟ್ಬಾಲ್ ಆಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಆ ಸಂದರ್ಭದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದುರಂತದಲ್ಲಿ ಇತರ 12 ಆಟಗಾರರು ಗಾಯಗೊಂಡಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಡಿಲು ಬಡಿದ ತಕ್ಷಣ ಅವೇ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರಿಗೆ ವೈದ್ಯರು ಚಿಕಿತ್ಸೆ ನೀಡಲು ಯತ್ನಿಸಿದರೂ ಅವರು ಬದುಕುಳಿಯಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘‘ಇದೊಂದು ಅತ್ಯಂತ ದುಃಖಕರ ಸಂಗತಿ. ಬಿರುಗಾಳಿ-ಮಳೆ ಸುರಿಯುವ ವೇಳೆ ಪಂದ್ಯವನ್ನು ನಿಲ್ಲಿಸುವುದು ಕಡ್ಡಾಯ ನಿಯಮವಾಗಬೇಕು’’ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದರು.

ಈ ದುರಂತಕ್ಕೆ ಲೀಗ್ ಆಡಳಿತವೇ ಕಾರಣ. ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು. ಮೃತ ಆಟಗಾರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಥಾಯ್ಲೆಂಡ್‌ನಲ್ಲಿ ಸಿಡಿಲು ಬಡಿದು ಸಂಭವಿಸುವ ಸಾವು ಸಾಮಾನ್ಯವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಆರೋಗ್ಯ ಇಲಾಖೆಯ ದತ್ತಾಂಶದ ಪ್ರಕಾರ, 2020 ಹಾಗೂ 2024ರ ನಡುವೆ ದೇಶಾದ್ಯಂತ 283 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಸಾಫ್ಟ್ವಾನ್ ಸಾವಿಗೆ ಥಾಯ್ಲೆಂಡ್ ಫುಟ್ಬಾಲ್ ಸಂಸ್ಥೆಯು ಸಂತಾಪ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News