Image Credit: X

ಒಕಝಾಕಿ: ಶೂಟ್‌ ಆಫ್‌ ನಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿದ ಭಾರತದ ಚಿಖಿತಾ ತನಿಪಾರ್ಥಿ–ಸಾಹಿಲ್ ಜಾಧವ್ ಜೋಡಿ, ಏಷ್ಯನ್ ಗೇಮ್ಸ್‌ನ ಮಿಶ್ರ ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು.

ಬುಧವಾರ ಒಕಾಝಾಕಿ ಚುವೊ ಸೊಗೊ ಪಾರ್ಕ್ ಮಲ್ಟಿಪರ್ಪಸ್ ಸ್ಕ್ವೇರ್‌ ನಲ್ಲಿ ನಡೆದ ಫೈನಲ್‌ ನಲ್ಲಿ ಭಾರತದ ಜೋಡಿ ದಕ್ಷಿಣ ಕೊರಿಯಾದ ಪಾರ್ಕ್ ಜಂಗ್‌ಯೂನ್–ಚೋಯ್ ಯೊಂಗ್‌ಹೀ ಜೋಡಿಯನ್ನು ಎದುರಿಸಿತು.

ಮೊದಲ ಎರಡು ಸೆಟ್‌ ಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತು. ಮೊದಲ ಸೆಟ್‌ ನಲ್ಲಿ 40-39 ಹಾಗೂ ಎರಡನೇ ಸೆಟ್‌ ನಲ್ಲಿ 40-39 ಅಂಕಗಳಿಂದ ಗೆದ್ದು 2-0 ಮುನ್ನಡೆ ಸಾಧಿಸಿತು. ಎರಡು ಸೆಟ್‌ ಗಳ ಬಳಿಕ ಭಾರತದ ಒಟ್ಟು ಅಂಕ 80-78 ಆಗಿತ್ತು.

ಬಳಿಕ ಕೊರಿಯಾ ತಿರುಗೇಟು ನೀಡಿತು. ಮೂರನೇ ಸೆಟ್‌ ನಲ್ಲಿ 39-38 ಮತ್ತು ನಾಲ್ಕನೇ ಸೆಟ್‌ನಲ್ಲಿ 40-39 ಅಂಕಗಳಿಂದ ಗೆದ್ದ ಕೊರಿಯಾ, ಒಟ್ಟು ಸ್ಕೋರ್ ಅನ್ನು 157-157ಕ್ಕೆ ತಂದಿತು. ಹೀಗಾಗಿ ಪಂದ್ಯ ಶೂಟ್‌ಆಫ್‌ ಗೆ ಸಾಗಿತು.

ಶೂಟ್‌ ಆಫ್‌ ನಲ್ಲಿ ಚಿಖಿತಾ ಮತ್ತು ಸಾಹಿಲ್ ಇಬ್ಬರೂ ಬುಲ್ಸ್‌ಐ ಗುರಿ ತಲುಪಿದರು. ಕೊರಿಯಾ ತಂಡದ ಮೊದಲ ಪ್ರಯತ್ನ 9 ಅಂಕಗಳಿಗೆ ಸೀಮಿತವಾಯಿತು. ಇದರಿಂದ ಭಾರತ ಚಿನ್ನದ ಪದಕ ಖಚಿತಪಡಿಸಿಕೊಂಡಿತು.

ಈ ಗೆಲುವಿನೊಂದಿಗೆ ಭಾರತವು 2028ರ ಲಾಸ್ ಏಂಜಲೀಸ್ (LA) ಒಲಿಂಪಿಕ್ಸ್‌ಗೆ ತನ್ನ ಕೋಟಾ ಸ್ಥಾನವನ್ನೂ ಖಚಿತಪಡಿಸಿಕೊಂಡಿದೆ. ಏಷ್ಯನ್ ಗೇಮ್ಸ್‌ ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 54ಕ್ಕೆ ಏರಿದ್ದು, ಇದರಲ್ಲಿ ಎಂಟು ಚಿನ್ನದ ಪದಕಗಳಿವೆ.

ಮಹಿಳಾ ತಂಡಕ್ಕೂ ಚಿನ್ನ

ಇದಕ್ಕೂ ಮುನ್ನ ಭಾರತದ ಮಹಿಳಾ ಕಾಂಪೌಂಡ್ ಬಿಲ್ಲುಗಾರಿಕೆ ತಂಡ ಚೀನಾವನ್ನು 238-234 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಉಳಿಸಿಕೊಂಡಿತ್ತು.

ಚಿಖಿತಾ, ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರಿಥಿಕಾ ಪ್ರದೀಪ್ ಅವರನ್ನೊಳಗೊಂಡ ಭಾರತ ತಂಡ ಫೈನಲ್‌ನಲ್ಲಿ ಪ್ರಾಬಲ್ಯ ಸಾಧಿಸಿತು. ಮೂವರು ಆಟಗಾರ್ತಿಯರು ಸರಣಿಯಲ್ಲೇ ಪರಿಪೂರ್ಣ 10 ಅಂಕಗಳನ್ನು ದಾಖಲಿಸಿ ಆರಂಭಿಕ ಸುತ್ತನ್ನು 60-58 ಅಂತರದಲ್ಲಿ ಗೆದ್ದರು.

238 ಅಂಕಗಳೊಂದಿಗೆ ಭಾರತ ವಿಶ್ವ ದಾಖಲೆಗೆ ಸರಿಸಮನಾಯಿತು. ದಕ್ಷಿಣ ಕೊರಿಯಾ 2014ರ ಇಂಚಿಯಾನ್ ಏಷ್ಯನ್ ಗೇಮ್ಸ್‌ ನಲ್ಲಿ ಇದೇ ಒಟ್ಟು ಅಂಕಗಳ ವಿಶ್ವ ದಾಖಲೆ ನಿರ್ಮಿಸಿತ್ತು.

ವುನಿಯರ್, ಯು ವಾಂಗ್ ಮತ್ತು ಫಾಂಗ್ಯಾವೊ ವೈ ಅವರನ್ನೊಳಗೊಂಡ ಚೀನಾ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು. ಪಾರ್ಕ್ ಜಂಗ್‌ಯೂನ್, ಪಾರ್ಕ್ ಯೆರಿನ್ ಮತ್ತು ಕಾಂಗ್ ಯೆಯೋನ್ಸಿಯೊ ಅವರನ್ನೊಳಗೊಂಡ ದಕ್ಷಿಣ ಕೊರಿಯಾ ತಂಡ ಚೈನೀಸ್ ತೈಪೆಯನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor