ಏಷ್ಯನ್ ಗೇಮ್ಸ್: ಅರುಣಾಚಲ ಪ್ರದೇಶದ ಮೂವರು ವೂಶೂ ಆಟಗಾರ್ತಿಯರಿಗೆ ಚೀನಾ ಪ್ರವೇಶ ನಕಾರ
Photo: twitter.com/PemaKhanduBJP
ಹೊಸದಿಲ್ಲಿ: ಚೀನಾದ ಹಂಗ್ಝೋಹು ಪಟ್ಟಣದಲ್ಲಿ ನಡೆಯುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ, ಭಾರತ ವೂಶೂ ತಂಡದಲ್ಲಿದ್ದ ಅರುಣಾಚಲ ಪ್ರದೇಶದ ಮೂವರು ವೂಶು ಆಟಗಾರ್ತಿಯರಿಗೆ ಚೀನಾ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ.
ನೀಮನ್ ವಂಗ್ಸು, ಒನಿಲು ತೇಗಾ ಮತ್ತು ಮೆಪುಂಗ್ ಲಮ್ಗು ಎಂಬ ಮೂವರು ಆಟಗಾರ್ತಿಯರು ಹಂಗ್ಝೋಹು ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿ (ಎಚ್ಎಜಿಓಸಿ) ಯಿಂದ ಮಾನ್ಯತಾ ಪತ್ರ ಪಡೆದಿದ್ದರು. ಈ ಮಾನ್ಯತಾ ಪತ್ರವನ್ನು ಪ್ರವೇಶ ವೀಸಾ ಎಂದು ಪರಿಗಣಿಸಲಾಗುತ್ತದೆ. ಅಥ್ಲೀಟ್ ಗಳು ತಮ್ಮ ಪ್ರಯಾಣ ದಾಖಲೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕಿದ್ದು, ಇದನ್ನು ಆಟಗಾರರು ಆಗಮಿಸುವ ವೇಳೆ ದೃಢೀಕರಿಸಲಾಗುತ್ತದೆ.
ಆದರೆ ಅರುಣಾಚಲ ಪ್ರದೇಶದ ಆಟಗಾರರು ಬುಧವಾರ ಏಷ್ಯನ್ ಗೇಮ್ಸ್ ಗೆ ತೆರಳಲು ಈ ಪ್ರಯಾಣ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಮುಂದಾದಾಗ ಸಾಧ್ಯವಾಗಲಿಲ್ಲ. 10 ಮಂದಿಯ ವೂಶೂ ತಂಡದ ಇತರ ಆಟಗಾರರು ಇತರ ಕೋಚಿಂಗ್ ಸಿಬ್ಬಂದಿಗೆ ಸಮಸ್ಯೆ ಎದುರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಈ ಮೂವರನ್ನು ಹೊರತುಪಡಿಸಿದ ವೂಶೂ ತಂಡ ಹಾಂಕಾಂಗ್ ಗೆ ಪ್ರಯಾಣ ಬೆಳೆಸಿದೆ. ಅಲ್ಲಿಂದ ಹಾಂಗ್ಝೋಹುಗೆ ಅವರು ಪ್ರಯಾಣ ಬೆಳೆಸಲಿದ್ದಾರೆ.
"ಸಂಘಟನಾ ಸಮಿತಿಯಿಂದ ಅಥ್ಲೀಟ್ ಗಳು ಮಾನ್ಯತಾ ಪತ್ರ ಪಡೆದರೆ, ಅವರು ಏಷ್ಯನ್ ಗೇಮ್ಸ್ ಗೆ ಪ್ರಯಾಣ ಬೆಳೆಸಲು ಅನುಮತಿ ಪಡೆದಿದ್ದಾರೆ ಎಂಬ ಅರ್ಥ. ಆದರೆ ಅಚ್ಚರಿಯೆಂದರೆ, ಈ ಮೂವರು ಆಟಗಾರ್ತಿಯರು ತಮ್ಮ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಹಾಗೂ ವಿಮಾನ ಏರಲು ಸಾಧ್ಯವಾಗಲಿಲ್ಲ" ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಕಳೆದ ಎರಡು ತಿಂಗಳಲಿ ಮೂವರು ಆಟಗಾರ್ತಿಯರು ಸ್ಪರ್ಧೆಗಾಗಿ ಚೀನಾಗೆ ಪ್ರಯಾಣ ಬೆಳೆಸಲು ಸಾಧ್ಯವಾಗದಿರುವ ಎರಡನೇ ಪ್ರಕರಣ ಇದಾಗಿದೆ. ಈ ಬಾರಿ ವಿಷಯ ಕಳೆದ ಬಾರಿಗಿಂತ ಸಂಕೀರ್ಣವಾಗಿದ್ದು, ಸರ್ಕಾರ ನಾಳೆ ಇದಕ್ಕೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಜುಲೈ ಕೊನೆಯ ವಾರ ಇದೇ ಆಟಗಾರ್ತಿಯರು ಚೀನಾದ ಚೆಂಗ್ಡು ಎಂಬಲ್ಲಿ ನಡೆದಿದ್ದ ವಿಶ್ವ ಯೂನಿವರ್ಸಿಟಿ ಗೇಮ್ಸ್ ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಚೀನಾ ಇವರಿಗೆ ಸ್ಟ್ಯಾಪಲ್ಡ್ ವೀಸಾ ನೀಡಿತ್ತು. (ಸ್ಟ್ಯಾಪಲ್ಡ್ ವೀಸಾ ಎಂದರೆ ಒಂದು ದೇಶ ತನ್ನದೆಂದು ಹೇಳಿಕೊಳ್ಳುವ ಪ್ರದೇಶದ ನಿವಾಸಿಗಳಿಗೆ ನೀಡುವ ವೀಸಾದ ಹೆಚ್ಚುವರಿ ಹಾಳೆ). ಅಂದರೆ ಅರುಣಾಚಲ ಪ್ರದೇಶವನ್ನು ಭಾರತದ ಭಾಗ ಎಂದು ಚೀನಾ ಪರಿಗಣಿಸುವುದಿಲ್ಲ ಎಂಬ ಅರ್ಥ. ಆದರೆ ಈ ಈಶಾನ್ಯ ರಾಜ್ಯದ ಮೇಲಿನ ಸಾರ್ವಭೌಮತ್ವವನ್ನು ಭಾರತ ಪ್ರತಿಪಾದಿಸುತ್ತಲೇ ಬಂದಿದ್ದು, ಚೀನಾದ ಪ್ರತಿಪಾದನೆಯನ್ನು ತಿರಸ್ಕರಿಸುತ್ತಾ ಬಂದಿದೆ.
ಚೀನಾ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಎಂಟು ಮಂದಿಯ ವೂಶು ತಂಡ ಕೂಟದಲ್ಲಿ ಭಾಗವಹಿಸಿರಲಿಲ್ಲ.