ದಿಲಿಪ್ ಗವಿತ್ | Photo Credit : PTI 

ನಗೋಯ, ಅ. 22: ಭಾರತೀಯ ಪ್ಯಾರಾ ಅತ್ಲೀಟ್ ದಿಲಿಪ್ ಗವಿತ್ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ತನ್ನ ಬಂಗಾರದ ಬೇಟೆ ಮುಂದುವರಿಸಿದ್ದು, ಗುರುವಾರ ನಡೆದ ಪುರುಷರ 400 ಮೀ. ಟಿ47 ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು.

ಪ್ರಸಕ್ತ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಗವಿತ್ ಗೆದ್ದಿರುವ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮೊದಲು ಪುರುಷರ 100 ಮೀ. ಟಿ47 ಓಟದಲ್ಲೂ ಗವಿತ್ ಚಿನ್ನದ ಪದಕ ಗೆದ್ದಿದ್ದರು. ಈ ಗೆಲುವಿನ ಮೂಲಕ ಗವಿತ್ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಒಟ್ಟು ಮೂರು ಪದಕಗಳನ್ನು ಗೆದ್ದಿದ್ದಾರೆ. 2022ರ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲೂ ಪುರುಷರ 400 ಮೀ. ಟಿ47 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಗುರುವಾರ ದಿಲಿಪ್ ಗವಿತ್ 48.27 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. ದಿಲಿಪ್ ಅವರ ಸಹ ಆಟಗಾರ ಭಾವಿಕ್ ಕುಮಾರ್ 49.31 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದರು. ಜಪಾನಿನ ಕಾಕೆರು ಇಶಿದಾ (49.58 ಸೆಕೆಂಡ್‌ಗಳು) ಮೂರನೇ ಸ್ಥಾನ ಪಡೆದರು.

ಮಹಿಳೆಯರ 400 ಮೀ. ಟಿ47 ಸ್ಪರ್ಧೆ: ಅಂಜನಾಬೆನ್‌ಗೆ ಚಿನ್ನ, ಬೆಳ್ಳಿ ಜಯಿಸಿದ ಜಯಂತಿ

ಭಾರತದ ಅಂಜನಾಬೆನ್ ಬುಂಬಾದಿಯಾ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳೆಯರ 400 ಮೀ. ಟಿ47 ಸ್ಪರ್ಧೆಯನ್ನು 59.97 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವುದರೊಂದಿಗೆ ಅಗ್ರ ಸ್ಥಾನ ಪಡೆದರು.

ಅಂಜನಾಬೆನ್ ಅವರ ಸಹ ಆಟಗಾರ್ತಿ ಜಯಂತಿ ಬೆಹಾರಾ 1:00.65 ಅವಧಿಯಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದರು. ಇದರೊಂದಿಗೆ ಭಾರತವು ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor