Photo Credit ; PTI 

ನಗೋಯ, ಅ. 22: ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಆರನೇ ದಿನವಾದ ಗುರುವಾರ ಏಳು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭರ್ಜರಿ ಸಾಧನೆ ಮಾಡಿದ ಭಾರತವು ಒಟ್ಟು ಪದಕಗಳ ಸಂಖ್ಯೆಯನ್ನು 88ಕ್ಕೆ ಏರಿಸಿಕೊಂಡಿದೆ. ಪದಕಪಟ್ಟಿಯಲ್ಲಿ ಮತ್ತೊಮ್ಮೆ ನಾಲ್ಕನೇ ಸ್ಥಾನಕ್ಕೇರಿದೆ.

ಅತ್ಲೆಟಿಕ್ಸ್, ಆರ್ಚರಿ, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್‌ನಲ್ಲಿ ಪದಕಗಳು ಹರಿದುಬಂದವು.

ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ ಎರಡು ಗಂಟೆಯೊಳಗೆ ಎರಡು ಚಿನ್ನದ ಪದಕಗಳನ್ನು ಜಯಿಸಿ ಎಲ್ಲರ ಗಮನ ಸೆಳೆದರು. ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅತ್ಲೀಟ್‌ಗಳು ಭಾರತಕ್ಕೆ ಅತಿ ದೊಡ್ಡ ಕೊಡುಗೆ ನೀಡಿದರು. ಸುವರ್ಣ ರಾಜ್, ಶೈಲೇಶ್ ಕುಮಾರ್, ಅಂಜನಾಬೆನ್, ದಿಲಿಪ್ ಗವಿತ್ ಹಾಗೂ ಸೊಲೈರಾಜ್ ಧರ್ಮರಾಜ್ ಚಿನ್ನದ ಪದಕ ಜಯಿಸಿದರು.

ಭಾರತವು ಇದೀಗ 21 ಚಿನ್ನ, 26 ಬೆಳ್ಳಿ ಹಾಗೂ 41 ಕಂಚಿನ ಪದಕಗಳನ್ನು ಜಯಿಸಿದೆ.

ಒಂದೇ ದಿನ ಏಳು ಚಿನ್ನದ ಪದಕಗಳನ್ನು ಗೆದ್ದಿರುವ ಭಾರತವು ಮತ್ತೊಮ್ಮೆ ನಾಲ್ಕನೇ ಸ್ಥಾನಕ್ಕೇರಿದೆ. ಎರಡನೇ ದಿನ ಆರನೇ ಸ್ಥಾನಕ್ಕೆ ಹಾಗೂ ಮೂರನೇ ದಿನ ಐದನೇ ಸ್ಥಾನಕ್ಕೆ ಕುಸಿದಿತ್ತು.

ಶೀತಲ್‌ಗೆ ಅವಳಿ ಚಿನ್ನ, ಇತಿಹಾಸ ನಿರ್ಮಿಸಿದ ಸ್ವಾತಿ ಚೌಧರಿ

19ರ ಹರೆಯದ ವಿಶ್ವದ ನಂ. 1 ಬಿಲ್ಲುಗಾರ್ತಿ ಶೀತಲ್, ಟೋಮನ್ ಕುಮಾರ್ ಅವರೊಂದಿಗೆ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಭಾರತೀಯ ಜೋಡಿಯು ಇಂಡೋನೇಷ್ಯಾದ ಅಯುದಿಯಾ ಫೆರೆಲ್ಲಿ ಹಾಗೂ ಕೆನ್ ಸ್ವಗುಮಿಲಾಂಗ್ ಅವರನ್ನು 151–148 ಅಂತರದಿಂದ ಮಣಿಸಿತು.

ಎರಡು ಗಂಟೆಗಳ ಬಳಿಕ ಶೀತಲ್ ಮಹಿಳೆಯರ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಸಿಂಗಾಪುರದ ಅಲಿಮ್ ನೂರ್ ಅವರನ್ನು 142–139 ಅಂತರದಿಂದ ಮಣಿಸಿ ಚಿನ್ನ ಜಯಿಸಿದರು.

ಬಿಲ್ಲುಗಾರ್ತಿ ಸ್ವಾತಿ ಚೌಧರಿ ಡಬ್ಲ್ಯು1 ವಿಭಾಗದಲ್ಲಿ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ದೇಶದ ಪರ ಮೊದಲ ಪದಕ ಜಯಿಸಿದರು. ಮಹಿಳೆಯರ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಚೀನಾದ ಸೆನ್ ಮೆಂಗ್‌ಕಾನ್ ವಿರುದ್ಧ 4–6ರಿಂದ ಸೋತ ಸ್ವಾತಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಮಹಿಳೆಯರ ಎಫ್54 ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಜಯಿಸುವುದರೊಂದಿಗೆ ಸುವರ್ಣ ರಾಜ್ ಗುರುವಾರ ಶುಭಾರಂಭ ಮಾಡಿದರು. 44ರ ವಯಸ್ಸಿನ ವೀಲ್‌ಚೇರ್ ಅತ್ಲೀಟ್ ಸುವರ್ಣ 15.66 ಮೀಟರ್ ದೂರ ಡಿಸ್ಕಸ್ ಎಸೆದರು.

ಪುರುಷರ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಶೈಲೇಶ್ ಕುಮಾರ್, ಮಹಿಳೆಯರ 400 ಮೀ. ಟಿ47 ವಿಭಾಗದಲ್ಲಿ ಅಂಜನಾಬೆನ್, ಪುರುಷರ 400 ಮೀ. ಟಿ47 ಫೈನಲ್‌ನಲ್ಲಿ ದಿಲಿಪ್ ಗವಿತ್ ಹಾಗೂ ಪುರುಷರ ಲಾಂಗ್‌ಜಂಪ್‌ನಲ್ಲಿ ಧರ್ಮರಾಜ್ ಚಿನ್ನದ ಪದಕ ಜಯಿಸಿದರು.

ಟೇಬಲ್ ಟೆನಿಸ್: ಭವಿನಾ ಪಟೇಲ್, ಶುಭಮ್‌ಗೆ ಕಂಚು

ಭಾರತವು ಪ್ಯಾರಾ ಟೇಬಲ್ ಟೆನಿಸ್‌ನಲ್ಲೂ ಪದಕ ಗೆದ್ದಿದೆ. ಭವಿನಾ ಪಟೇಲ್ ಹಾಗೂ ಶುಭಮ್ ವಧ್ವಾ ಮಿಕ್ಸೆಡ್ ಡಬಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor