Asian Para Games | ಪ್ಯಾರಾ ಸ್ವಿಮ್ಮಿಂಗ್: ಹ್ಯಾಟ್ರಿಕ್ ಪದಕ ಗೆದ್ದ ರವಿ ಕಾರ್ತಿಕ್
ರವಿ ಕಾರ್ತಿಕ್ | Photo Credit : NDTV
ನಗೋಯ, ಅ. 22: ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ ಸ್ವಿಮ್ಮರ್ ರವಿ ಕಾರ್ತಿಕ್ ಹ್ಯಾಟ್ರಿಕ್ ಪದಕ ಜಯಿಸಿ ಮಿಂಚಿದ್ದಾರೆ.
ಪುರುಷರ 50 ಮೀ. ಫ್ರೀಸ್ಟೈಲ್ ಎಸ್13 ಫೈನಲ್‌ನಲ್ಲಿ 25.89 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಆಂಧ್ರ ಪ್ರದೇಶದ ಸ್ವಿಮ್ಮರ್ ರವಿ ಕಾರ್ತಿಕ್ ಕಂಚಿನ ಪದಕ ಜಯಿಸಿದರು.
ಪ್ರಸಕ್ತ ಗೇಮ್ಸ್ ನಲ್ಲಿ ರವಿ ಕಾರ್ತಿಕ್ ಗೆದ್ದಿರುವ ಮೂರನೇ ಪದಕ ಇದಾಗಿದೆ. ಪಂದ್ಯಾವಳಿಯಲ್ಲಿ ಈಗಾಗಲೇ ಪುರುಷರ ಎಸ್13 100 ಮೀ. ಬ್ಯಾಕ್‌ಸ್ಟ್ರೋಕ್ ಹಾಗೂ ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
ಇಂಡೋನೇಷ್ಯಾದ ಮೌಲಾನಗಿಂತ ಕೇವಲ 0.38 ಸೆಕೆಂಡ್‌ಗಳಿಂದ ಹಿಂದುಳಿದ ಭಾರತೀಯ ಸ್ವಿಮ್ಮರ್ ಸ್ವಲ್ಪದರಲ್ಲೇ ಬೆಳ್ಳಿ ಪದಕದಿಂದ ವಂಚಿತರಾದರು.
ಮತ್ತೊಂದು ಬೆಳ್ಳಿ ಪದಕ ಗೆಲ್ಲುವುದರಿಂದ ವಂಚಿತರಾಗಿದ್ದರೂ ರವಿ ಕಾರ್ತಿಕ್ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಜಯಿಸಿದರು.
ಕಪಿಲ್ ಕುಮಾರ್ ಬೆಳ್ಳಿ, ಸ್ವಾತಿಕ್ ಪಾಟೀಲ್ ಹಾಗೂ ತೇಜಸ್ ನಂದಕುಮಾರ್ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದರೊಂದಿಗೆ ಭಾರತವು ಸ್ವಿಮ್ಮಿಂಗ್‌ನಲ್ಲೇ 10 ಪದಕಗಳನ್ನು ಬಾಚಿಕೊಂಡಿದೆ.
26ರ ವಯಸ್ಸಿನ ಕಪಿಲ್ ಪುರುಷರ 400 ಮೀ. ಫ್ರೀಸ್ಟೈಲ್ ಎಸ್10 ಸ್ಪರ್ಧೆಯಲ್ಲಿ 4:38.44 ಅವಧಿಯಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಜಪಾನಿನ ಅಕಿಟೊ ಮಿನಾಯ್ ಗೇಮ್ಸ್ ದಾಖಲೆಯೊಂದಿಗೆ (4:27.44) ಚಿನ್ನದ ಪದಕ ಜಯಿಸಿದರು. ಇರಾನ್‌ನ ಶಾಹಿನ್ (4:38.65) ಮೂರನೇ ಸ್ಥಾನ ಪಡೆದರು.
ತೇಜಸ್ ನಂದಕುಮಾರ್ ಗೆ ಕಂಚು: ಪ್ಯಾರಾ ಏಶ್ಯನ್ ಗೇಮ್ಸ್‌ನಲ್ಲಿ ತೇಜಸ್ ನಂದಕುಮಾರ್ ಪ್ಯಾರಾ ಸ್ವಿಮ್ಮಿಂಗ್‌ನಲ್ಲಿ ಮತ್ತೊಂದು ಪದಕ ಗೆದ್ದುಕೊಟ್ಟರು.
ತೇಜಸ್ ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಎಸ್7 ಫೈನಲ್‌ನಲ್ಲಿ 1:18.58 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿದರು.
ಚೀನಾದ ರುಯಾನ್ ಜಿಂಗ್‌ಸಾಂಗ್ ಗೇಮ್ಸ್ ದಾಖಲೆಯ ಸಮಯದಲ್ಲಿ (1:12.16) ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. ಭಾರತದ ಗೋಪಿಚಂದ್ ಫೈನಲ್‌ನಲ್ಲಿ ಆರನೇ ಸ್ಥಾನ ಪಡೆದರು.
ಸ್ವಾತಿಕ್ ಪಾಟೀಲ್ ಗೆ ಕಂಚು
ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ 100 ಮೀ. ಬ್ರೆಸ್ಟ್‌ಸ್ಟ್ರೋಕ್ ಎಸ್‌ಬಿ9 ಸ್ಪರ್ಧೆಯಲ್ಲಿ 1:13.77 ಅವಧಿಯಲ್ಲಿ ಗುರಿ ತಲುಪಿದ ಸ್ವಾತಿಕ್ ಪಾಟೀಲ್ ಕಂಚಿನ ಪದಕ ಜಯಿಸಿದರು.
ಇರಾನ್‌ನ ಸಿನಾ ಝಿಯಾಘಮಿನಿಜಾದ್ (1:09.47) ಚಿನ್ನದ ಪದಕ ಜಯಿಸಿದರು.