ಆಸ್ಟ್ರೇಲಿಯ| ವೃತ್ತಿಪರ ಕ್ರಿಕೆಟ್‌ನಿಂದ ಆಸ್ಟ್ರೇಲಿಯದ ಮಾಜಿ ವೇಗಿ ರಿಚರ್ಡ್‌ಸನ್ ನಿವೃತ್ತಿ
ರಿಚರ್ಡ್‌ಸನ್ | Photo Credit : NDTV
ಮೆಲ್ಬರ್ನ್, ಜ.27: ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಕೇನ್ ರಿಚರ್ಡ್‌ಸನ್ ಮಂಗಳವಾರ ವೃತ್ತಿಪರ ಕ್ರಿಕೆಟ್‌ನಿಂದ ತನ್ನ ನಿವೃತ್ತಿ ಪ್ರಕಟಿಸಿದ್ದಾರೆ. 2009ರಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿರುವ ರಿಚರ್ಡ್‌ಸನ್ 16 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದರು.
ಆಸ್ಟ್ರೇಲಿಯನ್ ಕ್ರಿಕೆಟಿಗರ ಅಸೋಸಿಯೇಶನ್ ಪ್ರಕಟನೆ ಹೊರಡಿಸುವ ಮೊದಲೇ 34ರ ಹರೆಯದ ರಿಚರ್ಡ್‌ಸನ್ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ನಿವೃತ್ತಿ ನಿರ್ಧಾರ ಪ್ರಕಟಿಸಿದರು.
ರಿಚರ್ಡ್‌ಸನ್ ಈ ವರ್ಷದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಒಂದು ವರ್ಷದ ಅವಧಿಗೆ ಸಿಡ್ನಿ ಸಿಕ್ಸರ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಅವರು ಕೇವಲ ಎರಡು ಪಂದ್ಯಗಳನ್ನು ಆಡಿದ್ದರು.
‘‘ನಾನು ಈ ವರ್ಷದ ಬಿಬಿಎಲ್ ಅಂತ್ಯದ ವೇಳೆಗೆ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಲು ಬಯಸಿದ್ದೇನೆ. ನನ್ನ ಜೀವನಕ್ಕೆ ಹೆಚ್ಚು ಖುಷಿಕೊಟ್ಟಿರುವ ಈ ಕ್ರೀಡೆಗೆ ವಿದಾಯ ಹೇಳುವ ಸರಿಯಾದ ಸಮಯ ಬಂದಿದೆ. ನಾನು ನನ್ನ ವೃತ್ತಿಜೀವನ ರೂಪಿಸಿದ ಎಲ್ಲ ಕೋಚ್‌ಗಳು, ಆಡಳಿತಗಾರರು ಹಾಗೂ ಸಹ ಆಟಗಾರರಿಗೆ ಧನ್ಯವಾದಗಳನ್ನು ಹೇಳಲು ಬಯಸುವೆ’’ ಎಂದು ರಿಚರ್ಡ್‌ಸನ್ ಹೇಳಿದ್ದಾರೆ.
ಬಿಗ್ ಬ್ಯಾಶ್ ಲೀಗ್‌ನಲ್ಲಿ ದೀರ್ಘ ನಂಟು ಹೊಂದಿರುವ ರಿಚರ್ಡ್‌ಸನ್ 2018-19ರ ಋತುವಿನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ಪರ ಪ್ರಶಸ್ತಿಯನ್ನು ಜಯಿಸಿದ್ದರು. 142 ವಿಕೆಟ್‌ಗಳೊಂದಿಗೆ ಬಿಬಿಎಲ್ ಇತಿಹಾಸದಲ್ಲಿ ಐದನೇ ಗರಿಷ್ಠ ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ರಿಚರ್ಡ್‌ಸನ್ 25 ಏಕದಿನ ಹಾಗೂ 36 ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡವನ್ನು ಪ್ರತಿನಿಧಿಸಿದ್ದಾರೆ. 2021ರಲ್ಲಿ ಯುಎಇನಲ್ಲಿ ಟಿ-20 ವಿಶ್ವಕಪ್ ವಿಜೇತ ಆಸ್ಟ್ರೇಲಿಯ ತಂಡದ ಸದಸ್ಯರಾಗಿದ್ದರು. ಆಸ್ಟ್ರೇಲಿಯದಲ್ಲಿ ನಡೆದಿದ್ದ ಮತ್ತೊಂದು ಟಿ-20 ವಿಶ್ವಕಪ್‌ನಲ್ಲೂ, 2019ರ ಏಕದಿನ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಪಡೆದಿದ್ದರು.