ಟೀಮ್ ಇಂಡಿಯಾಕ್ಕೆ ಮರಳಲು ಸರ್ಫರಾಝ್‌ಗೆ ಅಝರುದ್ದೀನ್ ಬೆಂಬಲ
ಅಝರುದ್ದೀನ್ , ಸರ್ಫರಾಝ್ ಖಾನ್ | Photo Credit : PTI
ಮುಂಬೈ, ಜ. 27: ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳುವ ಸರ್ಫರಾಝ್ ಖಾನ್‌ರ ಪ್ರಯತ್ನಗಳು ಬಲಗೊಳ್ಳುತ್ತಿವೆ ಹಾಗೂ ತನ್ನನ್ನು ನಿರ್ಲಕ್ಷಿಸುವುದು ಅಸಾಧ್ಯ ಎಂಬ ಸಂದೇಶವನ್ನು ಮುಂಬೈ ಬ್ಯಾಟರ್ ನೀಡುತ್ತಿದ್ದಾರೆ.
ಅವರು ಭಾರತೀಯ ತಂಡದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು 2024 ನವೆಂಬರ್‌ನಲ್ಲಿ. ಅಂದಿನಿಂದ ಅವರು ಪರಿವರ್ತನೆ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅವರು ಈಗ ತನ್ನ ದೇಹ ತೂಕ ಕಡಿಮೆ ಮಾಡಿಕೊಂಡಿದ್ದಾರೆ, ತನ್ನ ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಹಾಗೂ ಮುಖ್ಯವಾಗಿ ದೇಶಿ ಕ್ರಿಕೆಟ್‌ನಲ್ಲಿ ರನ್‌ಗಳ ಪ್ರವಾಹದ ಮೂಲಕ ಬೌಲರ್‌ಗಳನ್ನು ದಂಡಿಸಿದ್ದಾರೆ.
ಅಂಕಿ-ಅಂಶಗಳೇ ಕತೆಯನ್ನು ಹೇಳುತ್ತವೆ. ವಿಜಯ ಹಝಾರೆ ಟ್ರೋಫಿಯಲ್ಲಿ ಸರ್ಫರಾಝ್ 157, 55 ಮತ್ತು 62 ರನ್‌ಗಳನ್ನು ಗಳಿಸಿದರು. ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ 227 ರನ್‌ಗಳನ್ನು ಬಾರಿಸಿದರು. ಅವರ ಪ್ರತಿಯೊಂದು ಇನಿಂಗ್ಸ್ ಕೂಡ, ತಾನು ಮರುಮೌಲ್ಯಮಾಪನಕ್ಕೆ ಸಿದ್ಧನಾಗಿದ್ದೇನೆ ಎಂಬ ಸಂದೇಶವನ್ನು ಆಯ್ಕೆಗಾರರಿಗೆ ನೀಡುವಂತಿತ್ತು.
ಇತ್ತೀಚೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಅವರು ಸರ್ಫರಾಝ್‌ರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರಿವರ್ಸ್ ಸ್ವಿಂಗನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ಅವರು ಸರ್ಫರಾಝ್‌ಗೆ ಮಾರ್ಗದರ್ಶನ ನೀಡಿದ್ದಾರೆ ಎನ್ನಲಾಗಿದೆ.
‘‘ಅವರೊಬ್ಬ ಉತ್ತಮ ಆಕ್ರಮಣಶೀಲ ಆಟಗಾರ. ಅವರು ಅತ್ಯಂತ ಕ್ಷಿಪ್ರವಾಗಿ ಪಂದ್ಯವೊಂದರ ಗತಿಯನ್ನು ಬದಲಿಸಬಲ್ಲರು. ತನ್ನ ಮೇಲೆ ಬೌಲರ್‌ಗಳು ಪ್ರಾಬಲ್ಯ ಸಾಧಿಸುವುದನ್ನು ಅವರು ಬಯಸುವುದಿಲ್ಲ. ಅವರು ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸುತ್ತಿರುವುದು ಅವರ ಗುಣಮಟ್ಟವನ್ನು ತೋರಿಸುತ್ತದೆ’’ ಎಂದು ಅಝರುದ್ದೀನ್ ಹೇಳಿದ್ದಾರೆ.
ಸರ್ಫರಾಝ್‌ಗೆ ಇನ್ನೊಂದು ಅವಕಾಶವನ್ನು ನೀಡುವಂತೆ ಅಝರುದ್ದೀನ್, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ನೇರ ಮನವಿ ಮಾಡಿದ್ದಾರೆ.