ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ| ಅಲ್ಕರಾಝ್, ಝ್ವೆರೆವ್, ಸ್ವಿಟೋಲಿನಾ, ಸಬಲೆಂಕಾ ಸೆಮಿ ಫೈನಲ್‌ಗೆ ಲಗ್ಗೆ
ಆರ್ಯನಾ ಸಬಲೆಂಕಾ | Photo Credit : PTI
ಮೆಲ್ಬರ್ನ್, ಜ.27: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್, ಜರ್ಮನಿ ಆಟಗಾರ ಅಲೆಕ್ಸಾಂಡರ್ ಝ್ವೆರೆವ್, ಎಲಿನಾ ಸ್ವಿಟೋಲಿನಾ ಹಾಗೂ ಅಗ್ರ ಶ್ರೇಯಾಂಕದ ಆರ್ಯನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಲ್ಕರಾಝ್ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್‌ರನ್ನು 7-5, 6-2, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದರು. ಟೆನಿಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡುವುದರಿಂದ ಎರಡು ಹೆಜ್ಜೆ ಹಿಂದಿದ್ದಾರೆ.
22ರ ವಯಸ್ಸಿನ ಅಲ್ಕರಾಝ್ ಮೆಲ್ಬರ್ನ್‌ನಲ್ಲಿ ಈ ತನಕ ಸೆಟ್ ಸೋತಿಲ್ಲ. ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮಾತ್ರ ಈ ತನಕ ಗೆಲ್ಲಲು ಸಾಧ್ಯವಾಗಿಲ್ಲ. ಒಂದು ವೇಳೆ ಅಲ್ಕರಾಝ್ ರವಿವಾರ ನಡೆಯಲಿರುವ ಫೈನಲ್‌ಗೆ ತಲುಪಿ ಪ್ರಶಸ್ತಿ ಎತ್ತಿ ಹಿಡಿದರೆ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್ ಗೆದ್ದ ಕಿರಿಯ ಆಟಗಾರ ಎನಿಸಿಕೊಂಡು ಸ್ಪೇನ್ ಸೂಪರ್‌ಸ್ಟಾರ್ ರಫೆಲ್ ನಡಾಲ್ ದಾಖಲೆಯನ್ನು ಮುರಿಯಲಿದ್ದಾರೆ.
ಅಲ್ಕರಾಝ್ ಸೆಮಿ ಫೈನಲ್‌ನಲ್ಲಿ ಅಲೆಕ್ಸಾಂಡರ್ ಝ್ವೆರೆವ್ ಸವಾಲನ್ನು ಎದುರಿಸಲಿದ್ದಾರೆ.
ಕಳೆದ ವರ್ಷ ಫೈನಲ್‌ಗೆ ತಲುಪಿದ್ದ ಝ್ವೆರೆವ್ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಯುವ ಆಟಗಾರ ಲರ್ನರ್ ಟಿಯೆನ್‌ರನ್ನು 6-3, 6-7(5/7), 6-1, 7-6(7/3) ಸೆಟ್‌ಗಳ ಅಂತರದಿಂದ ಮಣಿಸಿದರು.
ವಿಶ್ವದ ಮೂರನೇ ರ್ಯಾಂಕಿನ ಆಟಗಾರ ಝ್ವೆರೆವ್ ಇನ್ನಷ್ಟೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲಬೇಕಾಗಿದೆ. 28ರ ವಯಸ್ಸಿನ ಝ್ವೆರೆವ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರೂ ಜನ್ನಿಕ್ ಸಿನ್ನರ್‌ಗೆ ಸೋತಿದ್ದರು. 2020ರ ಯು.ಎಸ್. ಓಪನ್ ಹಾಗೂ 2024ರ ಫ್ರೆಂಚ್ ಓಪನ್ ಟೂರ್ನಿಯಲ್ಲೂ ರನ್ನರ್- ಅಪ್‌ಗೆ ತೃಪ್ತಿಪಟ್ಟಿದ್ದರು.
ತಾಪಮಾನ 45 ಡಿಗ್ರಿಗೆ ತಲುಪಲಿದೆ ಎಂಬ ಮುನ್ಸೂಚನೆಯ ಹಿನ್ನೆಲೆಯಲ್ಲಿ ರಾಡ್ ಲಾವೆರ್ ಅರೆನಾದಲ್ಲಿ ಮುಚ್ಚಿದ ಮೇಲ್ಛಾವಣಿಯಡಿ ಪಂದ್ಯವನ್ನು ಆಡಲಾಯಿತು.
20ರ ಹರೆಯದ ಟಿಯೆನ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸ್ಪರ್ಧೆಯಲ್ಲಿದ್ದ ಕಿರಿಯ ವಯಸ್ಸಿನ ಹಾಗೂ ಕೆಳ ರ್ಯಾಂಕಿನ ಆಟಗಾರನಾಗಿದ್ದರು. ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯ ಆಡಿದ್ದರು.
ಕೊಕೊ ಗೌಫ್‌ಗೆ ಕಹಿ, ಸ್ವಿಟೋಲಿನಾಗೆ ಸಿಹಿ
ಅಮೆರಿಕದ ಮೂರನೇ ಶ್ರೇಯಾಂಕದ ಕೊಕೊ ಗೌಫ್‌ಗೆ ಸೋಲಿನ ಕಹಿ ಉಣಿಸಿದ ಎಲಿನಾ ಸ್ವಿಟೋಲಿನಾ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ರಾಡ್ ಲಾವೆರ್ ಅರೆನಾದ ಮುಚ್ಚಿದ ಮೇಲ್ಛಾವಣಿಯಡಿ 59 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ 31ರ ವಯಸ್ಸಿನ ಸ್ವಿಟೋಲಿನಾ 6-1, 6-2 ನೇರ ಸೆಟ್‌ಗಳ ಅಂತರದಿಂದ ಜಯಶಾಲಿಯಾದರು.
ಸ್ವಿಟೋಲಿನಾ ತನ್ನ ವೃತ್ತಿಬದುಕಿನಲ್ಲಿ ಮೂರನೇ ಬಾರಿ ಹಾಗೂ ಮೆಲ್ಬರ್ನ್‌ನಲ್ಲಿ ಮೊದಲ ಬಾರಿ ಸೆಮಿ ಫೈನಲ್‌ಗೆ ಪ್ರವೇಶಿಸಿದರು. ಆಸ್ಟ್ರೇಲಿಯನ್ ಓಪನ್‌ನಲ್ಲಿ 2018, 2019 ಹಾಗೂ 2025ರಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದರು.
12ನೇ ಶ್ರೇಯಾಂಕದ ಸ್ವಿಟೋಲಿನಾ ಈ ತಿಂಗಳಾರಂಭದಲ್ಲಿ ಆಕ್ಲೆಂಡ್‌ನಲ್ಲಿ ಪ್ರಶಸ್ತಿ ಗೆದ್ದ ನಂತರ ಸತತ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ.
ಸೆಮಿ ಫೈನಲ್‌ಗೆ ತಲುಪಿರುವ ಸ್ವಿಟೋಲಿನಾ ರ್ಯಾಂಕಿಂಗ್‌ನಲ್ಲಿ ಅಗ್ರ-10ಕ್ಕೆ ಮರಳುವ ಸಾಧ್ಯತೆಯಿದೆ.
ಗೌಫ್ ಅವರು ಪಂದ್ಯದುದ್ದಕ್ಕೂ ಅದರಲ್ಲೂ ಮುಖ್ಯವಾಗಿ ಸರ್ವ್ ವೇಳೆ ಪರದಾಟ ನಡೆಸಿದರು. ತನ್ನ ಮೊದಲ ಸರ್ವ್ ಪಾಯಿಂಟ್ಸ್‌ನಲ್ಲಿ ಶೇ.40ರಷ್ಟು ಗೆಲುವು ಪಡೆದಿದ್ದ ಗೌಫ್ 19 ಅನಗತ್ಯ ತಪ್ಪೆಸಗಿದರು.
ಸ್ವಿಟೋಲಿನಾ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾರನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ 2023ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು.
ಯೋವಿಚ್‌ಗೆ ಸೋಲು, ಸಬಲೆಂಕಾ ಸೆಮಿ ಫೈನಲ್‌ಗೆ
ಅಗ್ರ ಶ್ರೇಯಾಂಕದ ಆರ್ಯನಾ ಸಬಲೆಂಕಾ ಅಮೆರಿಕದ ಯುವ ಆಟಗಾರ್ತಿ ಈವಾ ಯೋವಿಚ್‌ರನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದರು. ಮೆಲ್ಬರ್ನ್ ಪಾರ್ಕ್‌ನಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲಾರುಸ್ ಆಟಗಾರ್ತಿ ಸಬಲೆಂಕಾ ಅವರು ಯೋವಿಚ್‌ರನ್ನು 6-3, 6-0 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
ಈ ಗೆಲುವಿನ ಮೂಲಕ 27ರ ಹರೆಯದ ಸಬಲೆಂಕಾ ಗ್ರ್ಯಾನ್‌ಸ್ಲಾಮ್ ವೃತ್ತಿಜೀವನದಲ್ಲಿ 14ನೇ ಬಾರಿ ಹಾಗೂ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂನಿಯಲ್ಲಿ ಸತತ ನಾಲ್ಕನೇ ಬಾರಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟರು.
ಸಬಲೆಂಕಾ 2023 ಹಾಗೂ 2024ರಲ್ಲಿ ಮೆಲ್ಬರ್ನ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿದ್ದರು. ಕಳೆದ ವರ್ಷ ಮತ್ತೊಂದು ಪ್ರಶಸ್ತಿಯ ಸನಿಹಕ್ಕೆ ತಲುಪಿದ್ದರು. ಆದರೆ, ಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಸ್ ವಿರುದ್ಧ ಸೋತಿದ್ದರು.
ನಾಲ್ಕನೇ ಸುತ್ತಿನಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾಗೆ ಸೋತಿರುವ ಮ್ಯಾಡಿಸನ್ ಅವರ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಕನಸು ಭಗ್ನವಾಗಿದೆ.
ಈ ಸೋಲಿನ ಮೂಲಕ 18ರ ವಯಸ್ಸಿನ ಯೋವಿಚ್ ದಿಟ್ಟ ಹೋರಾಟಕ್ಕೆ ತೆರೆ ಬಿದ್ದಿದೆ. ಮಹಿಳೆಯರ ಅಗ್ರ-100ರಲ್ಲಿರುವ ಕಿರಿಯ ಆಟಗಾರ್ತಿಯಾಗಿರುವ ಯೋವಿಚ್ 29ನೇ ಶ್ರೇಯಾಂಕ ಪಡೆದಿದ್ದರು.
ಯೋವಿಚ್ ಅವರು ಪ್ರಸಕ್ತ ಟೂರ್ನಿಯಲ್ಲಿ ಎರಡು ಬಾರಿಯ ಗ್ರ್ಯಾನ್‌ಸ್ಲಾಮ್ ಫೈನಲಿಸ್ಟ್ ಜಾಸ್ಮಿನ್ ಪಯೋಲಿನಿ ಅವರನ್ನು ಮಣಿಸಿ ಗಮನ ಸೆಳೆದಿದ್ದರು.