×
Ad

Australian Open | ಜೊಕೊವಿಕ್, ಸಿನ್ನರ್ ಸೆಮಿ ಫೈನಲ್‌ ಗೆ

Update: 2026-01-28 21:40 IST

ಜನ್ನಿಕ್ ಸಿನ್ನರ್ , ನೊವಾಕ್ ಜೊಕೊವಿಕ್ | Photo Credit : atptour.com

ಹೊಸದಿಲ್ಲಿ, ಜ.28: ಸರ್ಬಿಯಾದ ಸೂಪರ್‌ಸ್ಟಾರ್ ನೊವಾಕ್ ಜೊಕೊವಿಕ್ ಹಾಗೂ ವಿಶ್ವದ ನಂ.2 ಆಟಗಾರ ಜನ್ನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಥಳೀಯ ಫೇವರಿಟ್ ಬೆನ್ ಶೆಲ್ಟನ್ ಅವರನ್ನು 6–3, 6–4, 6–4 ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಇಟಲಿ ಆಟಗಾರ ಸಿನ್ನರ್ ಸತತ ಮೂರನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.

ಮೆಲ್ಬರ್ನ್ ಪಾರ್ಕ್‌ನಲ್ಲಿ ಸತತ 19ನೇ ಪಂದ್ಯವನ್ನು ಗೆದ್ದುಕೊಂಡಿರುವ ಸಿನ್ನರ್ ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಎದುರಿಸಲಿದ್ದಾರೆ. ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ 9ನೇ ಬಾರಿ ಹಾಗೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಬಾರಿ ಸೆಮಿ ಫೈನಲ್‌ಗೆ ಪ್ರವೇಶಿಸಿರುವ ಸಿನ್ನರ್ ಮುಂದಿನ ಸುತ್ತಿನಲ್ಲಿ ಹಿರಿಯ ಆಟಗಾರ ಜೊಕೊವಿಕ್‌ನಿಂದ ಕಠಿಣ ಸವಾಲು ಎದುರಿಸಲಿದ್ದಾರೆ.

ಸಿನ್ನರ್ ಅವರು ಆಸ್ಟ್ರೇಲಿಯನ್ ಓಪನ್ (2024), ಫ್ರೆಂಚ್ ಓಪನ್ (2025) ಹಾಗೂ ವಿಂಬಲ್ಡನ್ (2025) ಚಾಂಪಿಯನ್‌ಶಿಪ್‌ಗಳ ಸೆಮಿ ಫೈನಲ್‌ನಲ್ಲಿ ಜೊಕೊವಿಕ್ ಅವರನ್ನು ಸೋಲಿಸಿದ್ದರು.

ಮೂರನೇ ಬಾರಿ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ಶೆಲ್ಟನ್ ಈ ಹಿಂದಿನ ಪಂದ್ಯಗಳಂತೆಯೇ ಸಿನ್ನರ್ ವಿರುದ್ಧ ತಮ್ಮ ಶ್ರೇಷ್ಠ ಪ್ರದರ್ಶನ ನೀಡಲು ಪರದಾಡಿದರು.

ಪ್ರಮುಖ ಟೂರ್ನಿಯಲ್ಲಿ ಸಿನ್ನರ್–ಶೆಲ್ಟನ್ ನಾಲ್ಕನೇ ಬಾರಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್‌ನಲ್ಲಿ ತಲಾ ಎರಡು ಬಾರಿ ಸೇರಿ ಪ್ರತಿಬಾರಿಯೂ ಸಿನ್ನರ್ ಜಯ ಸಾಧಿಸಿದ್ದಾರೆ.

ಇಟಲಿಯ ಲೊರೆನ್ಜೋ ಮುಸೆಟ್ಟಿ ಗಾಯದ ಸಮಸ್ಯೆಯ ಕಾರಣದಿಂದ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಎದುರಾಳಿ ಜೊಕೊವಿಕ್ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.

ಮುಸೆಟ್ಟಿ ಗಾಯಗೊಂಡು ನಿವೃತ್ತಿಯಾದಾಗ 24 ಬಾರಿ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ವಿರುದ್ಧ ಮೊದಲ ಎರಡು ಸೆಟ್‌ಗಳನ್ನು 6–4, 6–3 ಅಂತರದಿಂದ ಗೆದ್ದಿದ್ದರು. ಮೂರನೇ ಸೆಟ್ ವೇಳೆ ಮುಸೆಟ್ಟಿಗೆ ಗಾಯ ತೀವ್ರವಾಗಿದ್ದು, ಬಲಗಾಲಿಗೆ ದೀರ್ಘಕಾಲ ವೈದ್ಯಕೀಯ ಚಿಕಿತ್ಸೆ ನೀಡಿದರೂ ನೋವು ಕಡಿಮೆಯಾಗಲಿಲ್ಲ.

ಜೊಕೊವಿಕ್ ತಮ್ಮ ಅದೃಷ್ಟದ ಮೈದಾನದಲ್ಲಿ ಸಂಭಾವ್ಯ ಸೋಲಿನಿಂದ ಪಾರಾಗಿದ್ದಾರೆ. 10 ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿರುವ ಜೊಕೊವಿಕ್ 25ನೇ ಗ್ರ್ಯಾನ್‌ಸ್ಲಾಮ್ ಟ್ರೋಫಿ ಜಯಿಸಿ ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ.

ಇದಕ್ಕೂ ಮೊದಲು ನಾಲ್ಕನೇ ಸುತ್ತಿನ ಎದುರಾಳಿ ಜಾಕಬ್ ಮೆನ್ಸಿಕ್ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಜೊಕೊವಿಕ್ ಒಂದೂ ಎಸೆತವನ್ನಾಡದೆ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು.

► ಜೆಸ್ಸಿಕಾ, ರೈಬಾಕಿನಾ ಸೆಮಿ ಫೈನಲ್‌ ಗೆ

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ಹಾಗೂ ಕಝಕ್‌ಸ್ತಾನದ ಎಲೆನಾ ರೈಬಾಕಿನಾ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಅಮೆರಿಕ ಆಟಗಾರ್ತಿಯರ ನಡುವಿನ ಕ್ವಾರ್ಟರ್ ಫೈನಲ್‌ನಲ್ಲಿ ಪೆಗುಲಾ ತಮ್ಮದೇ ದೇಶದ ಅಮಂಡಾ ಅನಿಸಿಮೋವಾವರನ್ನು 6–2, 7–6 (7/1) ಸೆಟ್‌ಗಳ ಅಂತರದಿಂದ ಮಣಿಸಿದರು.

ಮೆಲ್ಬರ್ನ್‌ನಲ್ಲಿ ಅಜೇಯವಾಗಿ ಮುಂದುವರೆದಿರುವ ಪೆಗುಲಾ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. 2024ರ ಯು.ಎಸ್. ಓಪನ್ ಫೈನಲ್‌ನಲ್ಲಿ ಆರ್ಯನಾ ಸಬಲೆಂಕಾ ವಿರುದ್ಧ ಸೋಲು ಅನುಭವಿಸಿದ್ದ ಪೆಗುಲಾ ಈ ಬಾರಿ ಪ್ರಶಸ್ತಿ ಕನಸು ಕಟ್ಟಿದ್ದಾರೆ.

ಹಾಲಿ ಚಾಂಪಿಯನ್ ಮ್ಯಾಡಿಸನ್ ಕೀಸ್ ಅವರನ್ನು ಮಣಿಸಿದ ಬಳಿಕ ಇದೇ ಮೊದಲ ಬಾರಿ ಪೆಗುಲಾ ಆಸ್ಟ್ರೇಲಿಯನ್ ಓಪನ್ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಅನಿಸಿಮೋವಾ ವಿರುದ್ಧ ಆಡಿದ ಹಿಂದಿನ ಮೂರೂ ಪಂದ್ಯಗಳಲ್ಲೂ ಪೆಗುಲಾ ಜಯ ಸಾಧಿಸಿದ್ದರು.

31 ವರ್ಷದ ಪೆಗುಲಾ ಸೆಮಿ ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಎಲೆನಾ ರೈಬಾಕಿನಾ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾ 12ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾರೊಂದಿಗೆ ಸೆಣಸಾಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News