ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜೆಮಿಮಾ ರೊಡ್ರಿಗ್ಸ್‌ಗೆ 12 ಲಕ್ಷ ರೂ ದಂಡ
ಜೆಮಿಮಾ ರೋಡ್ರಿಗ್ಸ್ | Photo Credit : PTI
ಹೊಸದಿಲ್ಲಿ, ಜ.28: ಗುಜರಾತ್ ಜಯಂಟ್ಸ್ ವಿರುದ್ಧ ಬುಧವಾರ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರೊಡ್ರಿಗ್ಸ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಮಂಗಳವಾರ ಬರೋಡಾ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಡೆಲ್ಲಿ ತಂಡವು ಮೂರು ರನ್ ಅಂತರದಿಂದ ವೀರೋಚಿತ ಸೋಲು ಕಂಡಿತ್ತು.
ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಿಧಾನಗತಿಯ ಓವರ್‌ಗಳಿಗೆ ಸಂಬಂಧಿಸಿದಂತೆ ಡಬ್ಲ್ಯುಪಿಎಲ್ ನೀತಿ ಸಂಹಿತೆಯಡಿಯಲ್ಲಿ ಇದು ಮೊದಲ ಪ್ರಮಾದವಾಗಿದ್ದು, ಜೆಮಿಮಾ ರೊಡ್ರಿಗ್ಸ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಡಬ್ಲ್ಯುಪಿಎಲ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸೋಲು ಡೆಲ್ಲಿ ತಂಡಕ್ಕೆ ದುಬಾರಿಯಾಗಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಆರು ಅಂಕ ಹಾಗೂ –0.164 ನೆಟ್ ರನ್ ರೇಟ್ ಹೊಂದಿರುವ ಡೆಲ್ಲಿ ತಂಡ ಅಗ್ರ ಮೂರು ಸ್ಥಾನ ಪಡೆದು ಪ್ಲೇ–ಆಫ್ ಪ್ರವೇಶಿಸಲು ತೀವ್ರ ಪೈಪೋಟಿ ಎದುರಿಸುತ್ತಿದೆ.
ಡೆಲ್ಲಿ ತಂಡವು ಫೆ.1ರಂದು ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೆಳ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಇದು ಡೆಲ್ಲಿ ಪಾಲಿಗೆ ನಾಕೌಟ್ ಪಂದ್ಯವಾಗಿದೆ.