×
Ad

ಮಹಿಳೆಯರ T20 ವಿಶ್ವಕಪ್ | ಮೊದಲ ಬಾರಿ ಅರ್ಹತೆ ಪಡೆದ ನೆದರ್‌ಲ್ಯಾಂಡ್ಸ್

Update: 2026-01-28 21:45 IST

Photo Credit : PTI 

ಕಠ್ಮಂಡು, ಜ.28: ಗ್ಲೋಬಲ್ ಕ್ವಾಲಿಫೈಯರ್ಸ್‌ನಲ್ಲಿ ಡಿಎಲ್‌ಎಸ್ ನಿಯಮದ ಮೂಲಕ ಅಮೆರಿಕ ತಂಡವನ್ನು 21 ರನ್‌ಗಳಿಂದ ಮಣಿಸಿದ ನೆದರ್‌ಲ್ಯಾಂಡ್ಸ್, ಇದೇ ಮೊದಲ ಬಾರಿ ಮಹಿಳೆಯರ ಟಿ–20 ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ನೇಪಾಳದ ಕೀರ್ತಿಪುರದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 130 ರನ್‌ಗಳ ಗುರಿ ಚೇಸ್ ಮಾಡುತ್ತಿದ್ದ ನೆದರ್‌ಲ್ಯಾಂಡ್ಸ್ ತಂಡವು, ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ 12 ಓವರ್‌ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು. ಈ ಹಂತದಲ್ಲಿ ಅಗತ್ಯ ಸ್ಕೋರ್‌ಗಿಂತ ಮುನ್ನಡೆಯಲ್ಲಿದ್ದ ಕಾರಣ ನೆದರ್‌ಲ್ಯಾಂಡ್ಸ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಗ್ರೂಪ್ ಹಂತದಲ್ಲಿ ಅಜೇಯವಾಗುಳಿದ ನೆದರ್‌ಲ್ಯಾಂಡ್ಸ್ ತಂಡವು ಝಿಂಬಾಬ್ವೆ, ಸ್ಕಾಟ್‌ಲ್ಯಾಂಡ್, ನೇಪಾಳ ಹಾಗೂ ಥಾಯ್ಲೆಂಡ್ ವಿರುದ್ಧ ಜಯ ಸಾಧಿಸಿ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿತ್ತು. ನಂತರ ತನ್ನ ಮೊದಲ ಸೂಪರ್ ಸಿಕ್ಸ್ ಪಂದ್ಯದಲ್ಲಿ ಅಮೆರಿಕ ತಂಡವನ್ನು ಮಣಿಸಿ, ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ವಿಶ್ವಕಪ್ ಅರ್ಹತೆಯನ್ನು ಖಚಿತಪಡಿಸಿಕೊಂಡಿತು.

ಮೊದಲ ಸೂಪರ್ ಸಿಕ್ಸ್ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 39 ರನ್‌ಗಳಿಂದ ಮಣಿಸಿದ್ದ ಬಾಂಗ್ಲಾದೇಶ ಕೂಡ ಈ ವರ್ಷದ ಟಿ–20 ವಿಶ್ವಕಪ್‌ಗೆ ನೇರ ಪ್ರವೇಶ ಪಡೆದಿದೆ.

ನೆದರ್‌ಲ್ಯಾಂಡ್ಸ್ ಹಾಗೂ ಬಾಂಗ್ಲಾದೇಶ ತಂಡಗಳು ಈ ವರ್ಷಾಂತ್ಯದಲ್ಲಿ ನಡೆಯಲಿರುವ 12 ತಂಡಗಳ ಟೂರ್ನಿಗೆ ಅರ್ಹತೆ ಪಡೆದಿವೆ. ಗ್ಲೋಬಲ್ ಕ್ವಾಲಿಫೈಯರ್ಸ್‌ನಲ್ಲಿ ಉಳಿದ ಎರಡು ಸ್ಥಾನಗಳಿಗಾಗಿ ಸ್ಕಾಟ್‌ಲ್ಯಾಂಡ್, ಐರ್‌ಲ್ಯಾಂಡ್, ಅಮೆರಿಕ ಹಾಗೂ ಥಾಯ್ಲೆಂಡ್ ತಂಡಗಳು ಸ್ಪರ್ಧೆ ನಡೆಸಿದ್ದವು.

ಐಸಿಸಿ ಮಹಿಳೆಯರ ಟಿ–20 ವಿಶ್ವಕಪ್ ಟೂರ್ನಿ ಜೂನ್ 12ರಂದು ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News