IND Vs NZ | ನಾಲ್ಕನೇ T20: ಭಾರತಕ್ಕೆ ಸೋಲುಣಿಸಿದ ಕಿವೀಸ್
ಸೀಫರ್ಟ್ ಅರ್ಧಶತಕ, ಸ್ಯಾಂಟ್ನರ್‌ಗೆ ಮೂರು ವಿಕೆಟ್
Photo Credit : PTI
ವಿಶಾಖಪಟ್ಟಣ, ಜ. 28: ಆರಂಭಿಕ ಬ್ಯಾಟರ್ ಟಿಮ್ ಸೀಫರ್ಟ್ ಅವರ ಬಿರುಸಿನ ಅರ್ಧಶತಕ (62 ರನ್, 36 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಮಿಚೆಲ್ ಸ್ಯಾಂಟ್ನರ್ (3–26) ನೇತೃತ್ವದ ಶಿಸ್ತುಬದ್ಧ ಬೌಲಿಂಗ್ ದಾಳಿಯ ಬಲದಿಂದ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ನಾಲ್ಕನೇ ಟ್ವೆಂಟಿ–20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡವನ್ನು 50 ರನ್‌ಗಳ ಅಂತರದಿಂದ ಮಣಿಸಿತು.
ಈಗಾಗಲೇ ಐದು ಪಂದ್ಯಗಳ ಸರಣಿಯನ್ನು ಕಳೆದುಕೊಂಡಿದ್ದ ಕಿವೀಸ್ ಪಡೆ, ಬುಧವಾರ ನಡೆದ ಪಂದ್ಯದಲ್ಲಿ ಸಮಾಧಾನಕರ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲ್ಯಾಂಡ್ ತಂಡವು ಭರ್ಜರಿ ಆರಂಭದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 215 ರನ್ ಗಳಿಸಿತು.
ಟಿ–20 ಪಂದ್ಯಗಳಲ್ಲಿ ಭಾರತ ವಿರುದ್ಧ ಕಿವೀಸ್ ತಂಡ ದಾಖಲಿಸಿದ ಎರಡನೇ ಗರಿಷ್ಠ ಮೊತ್ತ ಇದಾಗಿದೆ. 2019ರಲ್ಲಿ ವೆಲ್ಲಿಂಗ್ಟನ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 219 ರನ್ ಗಳಿಸಿತ್ತು.
216 ರನ್‌ಗಳ ಗುರಿ ಪಡೆದ ಭಾರತ ತಂಡವು ಶಿವಂ ದುಬೆ ಅವರ ಏಕಾಂಗಿ ಹೋರಾಟದ (65 ರನ್, 23 ಎಸೆತ, 3 ಬೌಂಡರಿ, 7 ಸಿಕ್ಸರ್) ಹೊರತಾಗಿಯೂ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟಾಯಿತು.
ಮೊದಲ ಓವರ್‌ನ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ (0) ವಿಕೆಟ್ ಕಳೆದುಕೊಂಡ ಭಾರತ ತಂಡ ಸೋಲಿನ ಮುನ್ಸೂಚನೆ ನೀಡಿತು. ನಾಯಕ ಸೂರ್ಯಕುಮಾರ್ ಯಾದವ್ (8 ರನ್) ಕೂಡ ಬೇಗನೆ ಔಟಾದರು.
ರಿಂಕು ಸಿಂಗ್ (39 ರನ್, 30 ಎಸೆತ) ಹಾಗೂ ಸಂಜು ಸ್ಯಾಮ್ಸನ್ (24 ರನ್, 15 ಎಸೆತ) ಒಂದಷ್ಟು ಪ್ರತಿರೋಧ ಒಡ್ಡಿದರು. ಹಾರ್ದಿಕ್ ಪಾಂಡ್ಯ (2 ರನ್) ಮತ್ತು ಹರ್ಷಿತ್ ರಾಣಾ (9 ರನ್) ಸಂಪೂರ್ಣ ವಿಫಲರಾದರು.
ಕಿವೀಸ್ ಪರ ಮಿಚೆಲ್ ಸ್ಯಾಂಟ್ನರ್ (3–26) ಯಶಸ್ವಿ ಪ್ರದರ್ಶನ ನೀಡಿದರು. ಜೇಕಬ್ ಡಫಿ (2–33) ಹಾಗೂ ಇಶ್ ಸೋಧಿ (2–46) ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ಟಿಮ್ ಸೀಫರ್ಟ್ ಮತ್ತು ಡೆವೊನ್ ಕಾನ್ವೆ (44 ರನ್, 23 ಎಸೆತ, 4 ಬೌಂಡರಿ, 3 ಸಿಕ್ಸರ್) ಮೊದಲ ವಿಕೆಟ್‌ಗೆ ಕೇವಲ 50 ಎಸೆತಗಳಲ್ಲಿ 100 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಕಾನ್ವೆ ಔಟಾದ ಬಳಿಕ ರಚಿನ್ ರವೀಂದ್ರ (2 ರನ್) ಹಾಗೂ ಸೀಫರ್ಟ್ ಕೂಡ ಪೆವಿಲಿಯನ್ ಸೇರಿದರು. ಸೀಫರ್ಟ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಟಿ–20 ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಜಂಟಿ ವೇಗದ ಅರ್ಧಶತಕ ಸಾಧನೆ ಇದಾಗಿದೆ. 2020ರಲ್ಲಿ ಆಕ್ಲೆಂಡ್‌ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಈ ಸಾಧನೆ ಮಾಡಿದ್ದರು.
ಗ್ಲೆನ್ ಫಿಲಿಪ್ಸ್ 24 ರನ್ ಗಳಿಸಿ ಕುಲದೀಪ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಮಾರ್ಕ್ ಚಾಪ್ಮನ್ (9), ನಾಯಕ ಮಿಚೆಲ್ ಸ್ಯಾಂಟ್ನರ್ (11) ಹಾಗೂ ಝ್ಯಾಕ್ ಫೌಲ್ಕ್ಸ್ (13) ದೊಡ್ಡ ಮೊತ್ತ ಸೇರಿಸುವಲ್ಲಿ ವಿಫಲರಾದರು.
ಡ್ಯಾರಿಲ್ ಮಿಚೆಲ್ ಔಟಾಗದೆ 39 ರನ್ ಗಳಿಸಿ ಕಿವೀಸ್ ಮೊತ್ತವನ್ನು 215ಕ್ಕೆ ತಲುಪಿಸಿದರು. ಮಿಚೆಲ್ ಹಾಗೂ ಮ್ಯಾಟ್ ಹೆನ್ರಿ 8ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 12 ಎಸೆತಗಳಲ್ಲಿ 33 ರನ್ ಸೇರಿಸಿದರು. ಹರ್ಷಿತ್ ರಾಣಾ ಎಸೆದ ಕೊನೆಯ ಓವರ್‌ನಲ್ಲಿ ಕಿವೀಸ್ ಪಡೆ 14 ರನ್ ಕಲೆಹಾಕಿತು.
ಭಾರತದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ (2–33) ಹಾಗೂ ಕುಲದೀಪ್ ಯಾದವ್ (2–39) ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಜಸ್‌ಪ್ರಿತ್ ಬುಮ್ರಾ (1–38) ಮತ್ತು ರವಿ ಬಿಷ್ಣೋಯಿ (1–49) ತಲಾ ಒಂದು ವಿಕೆಟ್ ಪಡೆದರು.
ರಿಂಕು ಸಿಂಗ್ ಟಿ–20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಪಡೆದ ಭಾರತದ ಎರಡನೇ ಔಟ್‌ಫೀಲ್ಡರ್ ಎನಿಸಿಕೊಂಡರು. 2014ರಲ್ಲಿ ಎಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಜಿಂಕ್ಯ ರಹಾನೆ ಈ ಸಾಧನೆ ಮಾಡಿದ್ದರು.
►ಇಶಾನ್ ಕಿಶನ್‌ಗೆ ಗಾಯ; ಆಡುವ ಬಳಗದಿಂದ ಹೊರಗೆ
ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಯಾವುದೇ ಹಿಂಜರಿಕೆ ಇಲ್ಲದೆ ಫೀಲ್ಡಿಂಗ್ ಆಯ್ದುಕೊಂಡರು. ಆತಿಥೇಯ ತಂಡವು ಒಂದು ಬದಲಾವಣೆ ಮಾಡಿದ್ದು, ಮೂರನೇ ಪಂದ್ಯದ ವೇಳೆ ಗಾಯಗೊಂಡಿದ್ದ ಅಗ್ರಕ್ರಮಾಂಕದ ಬ್ಯಾಟರ್ ಇಶಾನ್ ಕಿಶನ್ ಬದಲಿಗೆ ವೇಗದ ಬೌಲರ್ ಅರ್ಷದೀಪ್ ಸಿಂಗ್‌ಗೆ ಅವಕಾಶ ನೀಡಲಾಯಿತು.
ನ್ಯೂಝಿಲ್ಯಾಂಡ್ ತಂಡವೂ ಆಡುವ 11ರ ಬಳಗದಲ್ಲಿ ಒಂದು ಬದಲಾವಣೆ ಮಾಡಿತು. ಕೈಲ್ ಜೆಮಿಸನ್ ಸ್ಥಾನಕ್ಕೆ ಝ್ಯಾಕ್ ಫೌಲ್ಕ್ಸ್ ಅವಕಾಶ ಪಡೆದರು. ಜೆಮಿಸನ್ ಈ ಪಂದ್ಯಕ್ಕೆ ಫಿಟ್ ಇರಲಿಲ್ಲ. ಜೇಮ್ಸ್ ನೀಶಾಮ್ ಪಂದ್ಯ ಆಡಲು ಫಿಟ್ ಆಗಿದ್ದರು.