ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ| ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಉಳಿಸಿಕೊಂಡ ಒಲಿವಿಯಾ, ಜಾನ್ ಪೀರ್ಸ್
ಕ್ರಿಸ್ಟಿನಾ ಮ್ಲಾಡೆನೋವಿಕ್ , ಮ್ಯಾನುಯೆಲ್ ಗಿನಾರ್ಡ್ | Photo Credit : AP \ PTI
ಮೆಲ್ಬರ್ನ್, ಜ.30: ಫ್ರೆಂಚ್ ಜೋಡಿ ಕ್ರಿಸ್ಟಿನಾ ಮ್ಲಾಡೆನೋವಿಕ್ ಹಾಗೂ ಮ್ಯಾನುಯೆಲ್ ಗಿನಾರ್ಡ್‌ರನ್ನು ಮಣಿಸಿದ ಆಸ್ಟ್ರೇಲಿಯದ ಒಲಿವಿಯಾ ಗಾಡೆಕಿ ಹಾಗೂ ಜಾನ್ ಪೀರ್ಸ್ 37 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ಜೋಡಿ ಎನಿಸಿಕೊಂಡರು.
ವೈಲ್ಡ್‌ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶಿಸಿದ್ದ ಒಲಿವಿಯಾ ಹಾಗೂ ಜಾನ್ ಪೀರ್ಸ್ ಫ್ರೆಂಚ್ ಜೋಡಿಯನ್ನು 4-6, 6-3(10-8) ಅಂತರದಿಂದ ಮಣಿಸಿದರು. 1989ರ ನಂತರ ಈ ಸಾಧನೆ ಮಾಡಿದ ಮೊದಲ ಮಿಕ್ಸೆಡ್ ಟೀಮ್ ಎನಿಸಿಕೊಂಡರು. 37 ವರ್ಷಗಳ ಹಿಂದೆ ಜಾನಾ ನೊವೊಟ್ನಾ ಹಾಗೂ ಜಿಮ್ ಪುಗ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದರು.
ಒಲಿವಿಯಾ ಹಾಗೂ ಜಾನ್ ಪೀರ್ಸ್ 62 ವರ್ಷಗಳ ನಂತರ ಮಿಕ್ಸೆಡ್ ಡಬಲ್ಸ್ ಟ್ರೋಫಿಯನ್ನು ಉಳಿಸಿಕೊಂಡ ಆಸ್ಟ್ರೇಲಿಯದ ಮೊದಲ ಜೋಡಿ ಎನಿಸಿಕೊಂಡರು. 62 ವರ್ಷಗಳ ಹಿಂದೆ ಮಾರ್ಗರೆಟ್ ಕೋರ್ಟ್ ಹಾಗೂ ಕೆನ್ ಫ್ಲೆಚರ್ ಈ ಸಾಧನೆ ಮಾಡಿದ್ದರು.
‘‘ಈಗ ನಾವು ಈ ಸ್ಥಾನದಲ್ಲಿರುವುದನ್ನು ನಂಬಲಾಗುತ್ತಿಲ್ಲ. ಈ ವರ್ಷ ಮತ್ತೊಮ್ಮೆ ಟ್ರೋಫಿಯನ್ನು ಗೆದ್ದಿರುವುದು ಅದ್ಭುತ ಸಾಧನೆ. ನಾವು ಈ ಸಾಧನೆ ಮಾಡಬಲ್ಲೆವು ಎಂದು ಗೊತ್ತಿತ್ತು’’ ಎಂದು ಪೀರ್ಸ್ ಜೊತೆ ಎರಡನೇ ಬಾರಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ಗಾಡೆಕಿ ಹೇಳಿದ್ದಾರೆ. ಗಾಡೆಕಿ ಪಾಲಿಗೆ ಇದು ನಾಲ್ಕನೇ ಪ್ರಶಸ್ತಿಯಾಗಿದೆ.
‘‘ಒಮ್ಮೆ ಗ್ರ್ಯಾನ್‌ಸ್ಲಾಮ್ ಗೆಲ್ಲುವುದು ತುಂಬಾ ಕಷ್ಟಕರ. ಆದರೆ ಅದನ್ನು ಉಳಿಸಿಕೊಳ್ಳುವುದು ಅತ್ಯಂತ ದೊಡ್ಡ ಗುರಿಯಾಗಿದೆ. ಕೆಲವು ತಿಂಗಳ ಹಿಂದೆ ನಾನು ಕಷ್ಟಪಟ್ಟು ನಡೆಯುತ್ತಿದ್ದೆ. ನಾನು ಊರುಗೋಲುಗಳನ್ನು ಬಳಸುತ್ತಿದ್ದೆ. ಗಿನಾರ್ಡ್ ನನ್ನ ಮೇಲೆ ನಂಬಿಕೆ ಇಟ್ಟು ಯೋಜನೆ ರೂಪಿಸಿದರು.ಅವರು ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು’’ಎಂದು ಡಬಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್‌ನಲ್ಲಿ 9 ಬಾರಿ ಗ್ರ್ಯಾನ್‌ಸ್ಲಾಮ್ ಗೆದ್ದಿರುವ ಮ್ಲಾಡೆನೋವಿಕ್ ಹೇಳಿದ್ದಾರೆ.