×
Ad

ವೆಸ್ಟ್‌ಇಂಡೀಸ್ ವಿರುದ್ಧ 43 ಎಸೆತಗಳಲ್ಲಿ ಟಿ-20 ಶತಕ| ಹಲವು ದಾಖಲೆಗಳನ್ನು ಮುರಿದ ಕ್ವಿಂಟನ್ ಡಿಕಾಕ್

Update: 2026-01-30 21:35 IST

 ಕ್ವಿಂಟನ್ ಡಿಕಾಕ್ | Photo Credit : AP \ PTI 

ಕೇಪ್‌ಟೌನ್, ಜ.30: ಸೆಂಚೂರಿಯನ್‌ನಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಮಿಂಚಿನ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ತನ್ನ ದೇಶದ ಸಾರ್ವಕಾಲಿಕ ಟಿ-20 ರನ್ ದಾಖಲೆಯನ್ನು ಮುರಿದರು. ಟ್ವೆಂಟಿ-20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವಾಗಲೇ ಐತಿಹಾಸಿಕ ಸಾಧನೆ ಮಾಡಿದರು.

ಗುರುವಾರ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ವಿಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದ ವೇಳೆ ಡಿಕಾಕ್ ಈ ಮಹತ್ವದ ಮೈಲಿಗಲ್ಲು ತಲುಪಿದರು.ಡಿಕಾಕ್ ಅವರ ಈ ಶತಕವು ದಕ್ಷಿಣ ಆಫ್ರಿಕಾ ತಂಡಕ್ಕೆ ಏಳು ವಿಕೆಟ್‌ಗಳ ಗೆಲುವು ತಂದುಕೊಟ್ಟಿದೆ. ಡಿಕಾಕ್ ಜಾಗತಿಕ ಪಂದ್ಯಾವಳಿಗಿಂತ ಮೊದಲು ಎದುರಾಳಿ ತಂಡಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.

430 ಪಂದ್ಯಗಳಲ್ಲಿ 31.46ರ ಸರಾಸರಿಯಲ್ಲಿ 139.10ರ ಸ್ಟ್ರೈಕ್‌ರೇಟ್‌ನಲ್ಲಿ 12,113 ರನ್ ಗಳಿಸಿರುವ ಡಿಕಾಕ್ ಸದ್ಯ ದಕ್ಷಿಣ ಆಫ್ರಿಕಾದ ಟಿ-20 ರನ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

ಚುಟುಕು ಮಾದರಿಯಲ್ಲಿ ಡಿಕಾಕ್ ಅವರ ದಾಖಲೆ ಸ್ಥಿರತೆಯನ್ನು ವ್ಯಾಖ್ಯಾನಿಸುತ್ತದೆ. ಅವರ ಎಂಟು ಟಿ-20 ಶತಕಗಳು ಹಾಗೂ 81 ಅರ್ಧಶತಕಗಳು ವರ್ಷಗಳ ನಿರಂತರ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ.

ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್‌ಗಳ ಪೈಕಿ ಡೇವಿಡ್ ಮಿಲ್ಲರ್ ಮಾತ್ರ 2017ರಲ್ಲಿ ಬಾಂಗ್ಲಾದೇಶದ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸಿದ್ದರು. ಡೆವಾಲ್ಡ್ ಬ್ರೆವಿಸ್ ಕಳೆದ ವರ್ಷ ಆಸ್ಟ್ರೇಲಿಯದ ವಿರುದ್ಧ 41 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದು ವೆಸ್ಟ್‌ಇಂಡೀಸ್ ವಿರುದ್ಧ ಡಿಕಾಕ್ ಗಳಿಸಿದ ಶತಕಕ್ಕಿಂತ ವೇಗವಾಗಿದೆ.

ಟಿ-20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಎರಡು ಬಾರಿ 200ಕ್ಕೂ ಅಧಿಕ ರನ್ ಚೇಸ್ ಮಾಡುವಾಗ ಡಿಕಾಕ್ ಶತಕ ಗಳಿಸಿದ್ದಾರೆ. ಇದರಲ್ಲಿ 250 ಪ್ಲಸ್ ಚೇಸ್ ಕೂಡ ಸೇರಿದೆ.

ಟಿ-20 ಇನಿಂಗ್ಸ್‌ನಲ್ಲಿ ಅತ್ಯಂತ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ದಕ್ಷಿಣ ಆಫ್ರಿಕಾ ಆಟಗಾರರ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದಿದ್ದಾರೆ. 10 ಸಿಕ್ಸರ್‌ಗಳನ್ನು ಸಿಡಿಸಿ ರೀಝಾ ಹೆಂಡ್ರಿಕ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ರಿಚರ್ಡ್ ಲೇವಿ 2012ರಲ್ಲಿ 13 ಸಿಕ್ಸರ್‌ಗಳನ್ನು ಸಿಡಿಸಿದ್ದು, ಈಗಲೂ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಡೇವಿಡ್ ಮಿಲ್ಲರ್ ಹಾಗೂ ರಿಲೀ ರೊಸ್ಸೌ ನಂತರ ಟಿ-20 ಕ್ರಿಕೆಟ್‌ನಲ್ಲಿ ಹಲವು ಶತಕಗಳನ್ನು ಗಳಿಸಿದ ದಕ್ಷಿಣ ಆಫ್ರಿಕಾದ ಮೂರನೇ ಆಟಗಾರನಾಗಿದ್ದಾರೆ.

ಡಿಕಾಕ್ ಪುರುಷರ ಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಶತಕಗಳನ್ನು(8)ಗಳಿಸಿದ ನಿಯೋಜಿತ ವಿಕೆಟ್‌ಕೀಪರ್ ಆಗಿದ್ದಾರೆ. ಒಂದೇ ಮೈದಾನದಲ್ಲಿ ಎರಡು ಬಾರಿ ಟಿ-20 ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಹಾಗೂ ಕಾಲಿನ್ ಮುನ್ರೊ ನಂತರ ವಿಶ್ವದ ಎರಡನೇ ಆಟಗಾರನಾಗಿದ್ದಾರೆ.

ಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ಪ್ರತ್ಯೇಕ ನಾಲ್ಕು ಬಾರಿ ದಕ್ಷಿಣ ಆಫ್ರಿಕಾದ ಪರ 150ಕ್ಕೂ ಅಧಿಕ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ವೆಸ್ಟ್‌ಇಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ 49 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ ಆರು ಬೌಂಡರಿಗಳ ಸಹಿತ 115 ರನ್ ಗಳಿಸಿರುವ ಡಿಕಾಕ್ ದಕ್ಷಿಣ ಆಫ್ರಿಕಾ ತಂಡವು ಕೇವಲ 17.3 ಓವರ್‌ಗಳಲ್ಲಿ 222 ರನ್ ಚೇಸ್ ಮಾಡುವಲ್ಲಿ ನೆರವಾಗಿದ್ದರು. ಈ ಗೆಲುವಿನ ಮೂಲಕ ಇನ್ನೂ ಪಂದ್ಯ ಬಾಕಿ ಇರುವಾಗಲೇ ದಕ್ಷಿಣ ಆಫ್ರಿಕಾ ತಂಡವು ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News