U19 ವಿಶ್ವಕಪ್‌ನಿಂದ ಬಾಂಗ್ಲಾ ಔಟ್: ಕುಂಟು ನೆಪ ಹೇಳಿದ ಬಿಸಿಬಿ!
PC: x.com/GagsOnCricket
ಢಾಕಾ: U19 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾ ತಂಡ ನಿರ್ಗಮಿಸಿದೆ. ಆದರೆ ತಂಡದ ವೈಫಲ್ಯ ಒಪ್ಪಿಕೊಳ್ಳುವ ಬದಲು ಪಂದ್ಯಗಳ ವೇಳಾಪಟ್ಟಿ ಮತ್ತು ಪ್ರಯಾಣ ವ್ಯವಸ್ಥೆಯ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ದೂಷಿಸಿದೆ.
ನ್ಯಾಯಸಮ್ಮತವಲ್ಲದ ವೇಳಾಪಟ್ಟಿ ಹಾಗೂ ಪದೇ ಪದೇ ಪ್ರಯಾಣ ಬೆಳೆಸಬೇಕಾದ ಕಾರಣ, ತಂಡದ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಬಿಸಿಬಿ ಆಪಾದಿಸಿದೆ. ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳಿಗಾಗಿ ಭಾರತಕ್ಕೆ ತಂಡ ಕಳುಹಿಸುವುದಿಲ್ಲ ಎಂದು ಹೇಳಿಕೆ ನೀಡಿ ಟೂರ್ನಿಯನ್ನು ಬಹಿಷ್ಕರಿಸಿರುವ ನಡುವೆಯೇ ಬಿಸಿಬಿ ಈ ಹೇಳಿಕೆ ನೀಡಿದೆ. ಪುರುಷರ ಟಿ20 ಟೂರ್ನಿಗೆ ಇದೀಗ ಬಾಂಗ್ಲಾದೇಶದ ಬದಲು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ಲಭ್ಯವಾಗಿದೆ. ಇದೀಗ ಬಿಸಿಬಿ ಮ್ಯಾಚ್ ಡೆವಲಪ್ಮೆಂಟ್ ಸಂಚಾಲಕ ಹಬೀಬುಲ್ ಬಶರ್ ದೇಶದ 19ರ ವಯೋಮಿತಿಯ ತಂಡದ ಪ್ರವಾಸ ಯೋಜನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
"ತಂಡದ ಮನಸ್ಥಿತಿಯ ಬದಲಾಗಿ ಇಂಗ್ಲೆಂಡ್ ಹಾಗೂ ಭಾರತ ವಿರುದ್ಧ ನಮ್ಮ ಲೆಕ್ಕಾಚಾರಗಳು ಕೈಕೊಟ್ಟವು. ನಾನು ನೆಪಗಳನ್ನು ಮುಂದಿಡುತ್ತಿದ್ದೇನೆ ಎಂದು ಜನ ಭಾವಿಸಿದರೂ ಪ್ರಯಾಣದ ವೇಳಾಪಟ್ಟಿಯ ಬಗ್ಗೆ ನಾನು ಹೇಳಲೇಬೇಕು. ಭಾರತ ವಿರುದ್ಧದ ಪಂದ್ಯಗಳ ಮುನ್ನ ನಮ್ಮ ಹುಡುಗರು ಸುಧೀರ್ಘ ಬಸ್ ಪ್ರಯಾಣ ಮಾಡಿ ತೀರಾ ದಣಿಯುವುದನ್ನು ತಪ್ಪಿಸಲು, ನೇರ ವಿಮಾನ ಇಲ್ಲದ ಕಾರಣ ಬಿಸಿಬಿ ಬಸ್ ಪ್ರಯಾಣದ ಬದಲು ದೇಶೀಯ ವಿಮಾನ ಪ್ರಯಾಣಕ್ಕೆ ಪಾವತಿಸಿತ್ತು" ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದ ಮುಖ್ಯ ಕೋಚ್ ನವೀದ್ ನವಾಝ್ ಮತ್ತು ಹಲವು ಆಟಗಾರರು ಪಂದ್ಯಗಳ ವೇಳಾಪಟ್ಟಿ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ಆರಂಭಿಕ ಪಂದ್ಯಕ್ಕೆ ತಂಡ ಹರಾರೆಯಿಂದ ಬುಲವಯೊ ಪಟ್ಟಣಕ್ಕೆ ಮಳೆಗಾಲದಲ್ಲಿ ಒಂಬತ್ತು ಗಂಟೆ ಕಾಲ ಬಸ್ ಪ್ರಯಾಣ ಕೈಗೊಳ್ಳಬೇಕಾಯಿತು. ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳ ವಿರುದ್ಧದ ಮಹತ್ವದ ಪಂದ್ಯಗಳಿಗಾಗಿ ಬಿಸಿಬಿ ಆಂತರಿಕ ವಿಮಾನ ವ್ಯವಸ್ಥೆ ಮಾಡಿತ್ತು. ಜನವರಿ 23ರಂದು ಹರಾರೆಯಲ್ಲಿ ಅಮೆರಿಕ ವಿರುದ್ಧದ ಪಂದ್ಯಕ್ಕೂ ಬಸ್ಸಿನಲ್ಲಿ ಮರಳುವ ಬದಲು ವಿಮಾನ ಪ್ರಯಾಣಕ್ಕೆ ಬೇಡಿಕೆ ಇತ್ತು. ಬಳಿಕ ಇಂಗ್ಲೆಂಡ್ ವಿರುದ್ಧ ಜ.26ರಂದು ನಡೆದ ಸೂಪರ್ ಸಿಕ್ಸ್ ಪಂದ್ಯಕ್ಕೂ ಬುಲವಯೊಗೆ ಪ್ರಯಾಣಿಸಲು ವಿಮಾನದ ಬೇಡಿಕೆ ಇತ್ತು.
"ವೇಳಾಪಟ್ಟಿಗಳು ನಮಗೆ ನ್ಯಾಯಸಮ್ಮತವಾಗಿರಲಿಲ್ಲ. ಆರಂಭಿಕ ವೇಳಾಪಟ್ಟಿಯಂತೆ ನಾವು ಎರಡು ಅಭ್ಯಾಸ ಪಂದ್ಯಗಳನ್ನು ಮಸ್ವಿಂಗೊ ಮತ್ತು ಬುಲಾವಿಯೊದಲ್ಲಿ ಆಡಬೇಕಿತ್ತು. ಬಳಿಕ ಐಸಿಸಿ ದಿಢೀರನೇ ವೇಳಾಪಟ್ಟಿ ಬದಲಿಸಿ, ಸ್ಥಳಗಳನ್ನು ಬದಲಿಸಿದ್ದರಿಂದ ಹೆಚ್ಚಿನ ಪ್ರಯಾಣ ಮಾಡಬೇಕಾಯಿತು ಎಂದು ಬಶರ್ ಹೇಳಿದ್ದಾರೆ.