ರಣಜಿ: ಕರ್ನಾಟಕ ಕ್ವಾರ್ಟರ್ ಫೈನಲ್ ಗೆ ಲಗ್ಗೆ
ಪಡಿಕ್ಕಲ್ ಶತಕ, ಪಂಜಾಬ್ ವಿರುದ್ಧ 5 ವಿಕೆಟ್ ಜಯ
Photo Credit: X@BCCIdomestic
ಮೊಹಾಲಿ, ಫೆ.1: ನಾಯಕ ಹಾಗೂ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಆಕರ್ಷಕ ಶತಕ (ಔಟಾಗದೆ 120 ರನ್, 85 ಎಸೆತ, 6 ಬೌಂಡರಿ, 5 ಸಿಕ್ಸರ್) ಹಾಗೂ ಮಯಾಂಕ್ ಅಗರ್ವಾಲ್ ಬಿರುಸಿನ ಅರ್ಧಶತಕದ (53 ರನ್, 36 ಎಸೆತ, 6 ಬೌಂಡರಿ, 1 ಸಿಕ್ಸರ್) ಸಹಾಯದಿಂದ ಕರ್ನಾಟಕ ಕ್ರಿಕೆಟ್ ತಂಡ ರಣಜಿ ಟ್ರೋಫಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಪಂಜಾಬ್ ತಂಡವನ್ನು ಐದು ವಿಕೆಟ್‌ಗಳ ಅಂತರದಿಂದ ಮಣಿಸಿತು.
ಈ ಋತುವಿನಲ್ಲಿ ಅತ್ಯಂತ ರೋಚಕ ಜಯ ಗಳಿಸಿರುವ ಕರ್ನಾಟಕ ತಂಡವು ‘ಬಿ’ ಗುಂಪಿನಲ್ಲಿ 27 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಲ್ಕನೇ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ತಂಡದ ಸವಾಲನ್ನು ಎದುರಿಸಲಿದೆ. ಅಂತಿಮ-8ರ ಘಟ್ಟ ತಲುಪಲು ಕರ್ನಾಟಕ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು.
ನಾಲ್ಕನೇ ದಿನವಾದ ರವಿವಾರ ಗೆಲ್ಲಲು 250 ರನ್ ಗುರಿ ಪಡೆದ ಕರ್ನಾಟಕ ತಂಡ ಕೇವಲ 27.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು.
ಆರಂಭಿಕ ಆಟಗಾರ ಕೆ.ಎಲ್. ರಾಹುಲ್ (13 ರನ್) ಬೇಗನೆ ಔಟಾದರು. ಆಗ ಎರಡನೇ ವಿಕೆಟ್ ಗೆ 113 ರನ್ ಜೊತೆಯಾಟ ನಡೆಸಿದ ಪಡಿಕ್ಕಲ್ ಹಾಗೂ ಅಗರ್ವಾಲ್ ತಂಡವನ್ನು ಆಧರಿಸಿದರು.
ಅಗರ್ವಾಲ್, ಅನೀಶ್ (1 ರನ್) ಹಾಗೂ ಆರ್. ಸ್ಮರಣ್ (1 ರನ್) ವಿಕೆಟ್‌ಗಳನ್ನು ಬೆನ್ನುಬೆನ್ನಿಗೆ ಕಳೆದುಕೊಂಡ ಕರ್ನಾಟಕ ತಂಡ ದಿಢೀರ್ ಕುಸಿತ ಕಂಡಿತು. ಈ ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು.
ಪಡಿಕ್ಕಲ್ ಜೊತೆ ಕೈಜೋಡಿಸಿದ ಶ್ರೇಯಸ್ ಗೋಪಾಲ್ (33 ರನ್, 22 ಎಸೆತ) ಐದನೇ ವಿಕೆಟ್ ಗೆ 67 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಗೆಲುವಿಗೆ 49 ರನ್ ಅಗತ್ಯವಿದ್ದಾಗ ಗೋಪಾಲ್ ಔಟಾದರು. ವಿದ್ಯಾಧರ ಪಾಟೀಲ್ (ಔಟಾಗದೆ 14 ರನ್) ಹಾಗೂ ಪಡಿಕ್ಕಲ್ ಮತ್ತೆ ಹಿನ್ನಡೆಯಾಗದಂತೆ ನೋಡಿಕೊಂಡರು.
ಇದಕ್ಕೂ ಮೊದಲು 3 ವಿಕೆಟ್ ನಷ್ಟಕ್ಕೆ 119 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಪಂಜಾಬ್ ತಂಡವು ಕರ್ನಾಟಕದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ 256 ರನ್‌ಗೆ ಆಲೌಟ್ ಆಯಿತು.
ಕರ್ನಾಟಕದ ಪರ ಶ್ರೇಯಸ್ ಗೋಪಾಲ್ (3-43) ಹಾಗೂ ಪ್ರಸಿದ್ಧ ಕೃಷ್ಣ (3-49) ತಲಾ ಮೂರು ವಿಕೆಟ್ ಕಬಳಿಸಿದರು. ಶಿಖರ್ ಶೆಟ್ಟಿ (2-82) ಎರಡು ವಿಕೆಟ್ ಪಡೆದರು.
►ಸಂಕ್ಷಿಪ್ತ ಸ್ಕೋರ್
ಪಂಜಾಬ್ ಮೊದಲ ಇನಿಂಗ್ಸ್: 309 ರನ್
ಪಂಜಾಬ್ ಎರಡನೇ ಇನಿಂಗ್ಸ್: 256 ರನ್
ಕರ್ನಾಟಕ ಮೊದಲ ಇನಿಂಗ್ಸ್: 316 ರನ್
ಕರ್ನಾಟಕ ಎರಡನೇ ಇನಿಂಗ್ಸ್: 252/5
ಪಂದ್ಯಶ್ರೇಷ್ಠ: ದೇವದತ್ತ ಪಡಿಕ್ಕಲ್