U19 ವಿಶ್ವಕಪ್ | ಪಾಕ್ ವಿರುದ್ಧ ಜಯ, ಭಾರತ ಸೆಮಿ ಫೈನಲ್ ಗೆ
ವೇದಾಂತ್ ಅರ್ಧಶತಕ, ಆಯುಷ್, ಖಿಲನ್ ಗೆ ತಲಾ 3 ವಿಕೆಟ್
Photo : BCCI
ಬುಲಾವಯೊ, ಫೆ. 1: ವೇದಾಂತ್ ತ್ರಿವೇದಿ ಅರ್ಧಶತಕದ (68 ರನ್, 98 ಎಸೆತ, 2 ಬೌಂಡರಿ, 1 ಸಿಕ್ಸರ್) ಕೊಡುಗೆ, ಆಯುಷ್ ಮ್ಹಾತ್ರೆ (3-21) ಹಾಗೂ ಖಿಲನ್ ಪಟೇಲ್ (3-35) ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ಅಂಡರ್-19 ವಿಶ್ವಕಪ್ ನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 58 ರನ್ ಗಳ ಅಂತರದಿಂದ ಮಣಿಸಿದೆ.
ಈ ಮೂಲಕ ಭಾರತವು ಸೆಮಿ ಫೈನಲ್ ಗೆ ಪ್ರವೇಶಿಸಿದ್ದು, ಫೆ. 3ರಂದು ಹರಾರೆಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಪಾಕಿಸ್ತಾನಕ್ಕೆ ಸೆಮಿ ಫೈನಲ್ ಗೆ ತಲುಪಲು 33.3 ಓವರ್ ಗಳಲ್ಲಿ ಗುರಿ ತಲುಪುವ ಅಗತ್ಯವಿತ್ತು. ಆದರೆ ಆ ನಿಟ್ಟಿನಲ್ಲಿ ಅದು ವಿಫಲವಾಯಿತು.
ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ಆರಂಭಿಕ ಕುಸಿತದಿಂದ ಚೇತರಿಸಿಕೊಂಡು 49.5 ಓವರ್ ಗಳಲ್ಲಿ 252 ರನ್ ಗಳಿಸಿ ಆಲೌಟ್ ಆಯಿತು. ಗೆಲ್ಲಲು 253 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ಉಸ್ಮಾನ್ ಖಾನ್ (66 ರನ್, 92 ಎಸೆತ, 7 ಬೌಂಡರಿ) ಅರ್ಧಶತಕದ ಹೊರತಾಗಿಯೂ ಭಾರತದ ಶಿಸ್ತಿನ ಬೌಲಿಂಗ್ ಗೆ ತತ್ತರಿಸಿ 46.2 ಓವರ್ ಗಳಲ್ಲಿ 194 ರನ್ ಗಳಿಸಿ ಆಲೌಟ್ ಆಯಿತು.
ಆಲ್‌ರೌಂಡ್ ಪ್ರದರ್ಶನ ನೀಡಿದ ಕನಿಷ್ಕ್ ಚೌಹಾಣ್ (35 ರನ್, 1/30) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇದಕ್ಕೂ ಮೊದಲು ಆ್ಯರನ್ ಜಾರ್ಜ್ (16 ರನ್) ಅವರೊಂದಿಗೆ ಮೊದಲ ವಿಕೆಟ್‌ಗೆ 47 ರನ್ ಗಳಿಸಿದ ವೈಭವ್ ಸೂರ್ಯವಂಶಿ (30 ರನ್, 22 ಎಸೆತ) ಹಾಗೂ ನಾಯಕ ಆಯುಷ್ ಮ್ಹಾತ್ರೆ (0) 8ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಜಾರ್ಜ್ ಕೂಡ 9ನೇ ಓವರ್‌ನಲ್ಲಿ ವಿಕೆಟ್ ಕೈಚೆಲ್ಲಿದಾಗ ಭಾರತ 47 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.
ವೇದಾಂತ್ ಹಾಗೂ ವಿಹಾನ್ (21 ರನ್) 4ನೇ ವಿಕೆಟ್‌ಗೆ 62 ರನ್ ಸೇರಿಸಿ ತಂಡವನ್ನು ಆಧರಿಸಿದರು. ವಿಹಾನ್ ಹಾಗೂ ಅಭಿಜ್ಞಾನ್ ಕುಂಡು (16 ರನ್) ವಿಕೆಟ್ ಒಪ್ಪಿಸಿದಾಗ ಭಾರತವು 147 ರನ್‌ಗೆ ಐದನೇ ವಿಕೆಟ್ ಕಳೆದುಕೊಂಡಿತು.
ಕನಿಷ್ಕ್ ಚೌಹಾಣ್ (35 ರನ್, 29 ಎಸೆತ), ಅಂಬರೀಶ್ (29 ರನ್, 38 ಎಸೆತ) ಹಾಗೂ ಖಿಲನ್ ಪಟೇಲ್ (21 ರನ್, 15 ಎಸೆತ) ಭಾರತವನ್ನು 252 ರನ್‌ಗೆ ತಲುಪಿಸಿದರು.
ಪಾಕಿಸ್ತಾನದ ಪರವಾಗಿ ಅಬ್ದುಲ್ ಹುಸೇನ್ (3-33) ಯಶಸ್ವಿ ಪ್ರದರ್ಶನ ನೀಡಿದರು.