ಆಸ್ಟ್ರೇಲಿಯನ್ ಓಪನ್: ಅಲ್ಕರಾಝ್ ಚಾಂಪಿಯನ್
► ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಗೆದ್ದ ಕಿರಿಯ ಆಟಗಾರ ► ವೃತ್ತಿಜೀವನದ ಏಳನೇ ಪ್ರಶಸ್ತಿ ಗೆದ್ದ ವಿಶ್ವದ ನಂ.1 ಆಟಗಾರ ► ಮೆಲ್ಬರ್ನ್ ನಲ್ಲಿ ಮೊದಲ ಬಾರಿ ಫೈನಲ್ ನಲ್ಲಿ ಸೋತ ಜೊಕೊವಿಕ್
ಅಲ್ಕರಾಝ್ Photo : PTI
ಮೆಲ್ಬರ್ನ್, ಫೆ.1: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ಹತ್ತು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು ನಾಲ್ಕು ಸೆಟ್ಗಳಿಂದ ಮಣಿಸಿ 2026ರ ಆವೃತ್ತಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರಾಡ್ ಲಾವೆರ್ ಅರೆನಾದಲ್ಲಿ ರವಿವಾರ ನಡೆದ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ಸೋಲಿನಿಂದ ಪುಟಿದೆದ್ದ ಅಲ್ಕರಾಝ್ ವಿಶ್ವದ ನಂ.4ನೇ ಆಟಗಾರ ಜೊಕೊವಿಕ್ರನ್ನು 2-6, 6-2, 6-3, 7-5 ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ.
ಟೆನಿಸ್ ಮುಕ್ತ ಯುಗದಲ್ಲಿ ತನ್ನ 22ನೇ ವಯಸ್ಸಿನಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ ಕಿರಿಯ ವಯಸ್ಸಿನ ಪುರುಷ ಆಟಗಾರ ಎನಿಸಿಕೊಂಡಿರುವ ಸ್ಪೇನ್ನ ಅಲ್ಕರಾಝ್ ಇತಿಹಾಸ ನಿರ್ಮಿಸಿದರು. ಪಂದ್ಯ ವೀಕ್ಷಿಸುತ್ತಿದ್ದ ತಮ್ಮದೇ ದೇಶದ ರಫೆಲ್ ನಡಾಲ್ ಅವರ ದಾಖಲೆಯನ್ನು ಮುರಿದರು.
ಅಲ್ಕರಾಝ್ ವೃತ್ತಿಜೀ ವನದಲ್ಲಿ ಏಳನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಎತ್ತಿ ಹಿಡಿದರು. ಈ ಹಿಂದೆ ಯು.ಎಸ್. ಓಪನ್( 2022), ವಿಂಬಲ್ಡನ್(2023), ಫ್ರೆಂಚ್ ಓಪನ್(2024), ವಿಂಬಲ್ಡನ್(2024), ಫ್ರೆಂಚ್ ಓಪನ್(2025) ಹಾಗೂ ಯು.ಎಸ್. ಓಪನ್(2025)ಪ್ರಶಸ್ತಿ ಗೆದ್ದಿದ್ದಾರೆ.
ಆಸ್ಟ್ರೇಲಿಯನ್ ಓಪನ್ನಲ್ಲಿ ಈ ಹಿಂದೆ 10 ಬಾರಿ ಪ್ರಶಸ್ತಿಗಳನ್ನು ಗೆದ್ದಿರುವ ಸರ್ಬಿಯದ ಸೂಪರ್ಸ್ಟಾರ್ ಜೊಕೊವಿಕ್ ಇದೇ ಮೊದಲ ಬಾರಿ ಫೈನಲ್ನಲ್ಲಿ ಸೋತಿದ್ದಾರೆ. 38ರ ಹರೆಯದ ಜೊಕೊವಿಕ್ಗೆ ಈ ಬಾರಿಯೂ ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಕೈಗೆಟುಕಲಿಲ್ಲ.
ಈ ಗೆಲುವಿನ ಮೂಲಕ ಅಲ್ಕರಾಝ್ ಅವರು ವಿಶ್ವ ಟೆನಿಸ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಭದ್ರಪಡಿಸಿಕೊಂಡರು. ಇಟಲಿಯ ಜನ್ನಿಕ್ ಸಿನ್ನರ್ ಎರಡನೇ ಸ್ಥಾನ ಉಳಿಸಿಕೊಂಡರೆ, ಜೊಕೊವಿಕ್ ಮೂರನೇ ಸ್ಥಾನಕ್ಕೇರಲಿದ್ದಾರೆ.
ಅಲ್ಕರಾಝ್ ಐತಿಹಾಸಿಕ ಸಾಧನೆ
22 ವರ್ಷ, 272ನೇ ದಿನಗಳಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಟ್ರೋಫಿಗಳನ್ನು ಗೆದ್ದಿರುವ ಅಲ್ಕರಾಝ್ ಇತಿಹಾಸ ನಿರ್ಮಿಸಿದರು.
1938ರ ಫ್ರೆಂಚ್ ಚಾಂಪಿಯನ್ಶಿಪ್ನಲ್ಲಿ 22 ವರ್ಷ, 363 ದಿನಗಳಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದಿರುವ ಡಾನ್ ಬಜ್ ದಾಖಲೆಯನ್ನು ಮುರಿದರು.
1968ರಲ್ಲಿ ಆರಂಭವಾದ ಟೆನಿಸ್ ಮುಕ್ತ ಯುಗದಲ್ಲಿ ಕೇವಲ ಐವರು ಆಟಗಾರರು ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ರಾಡ್ ಲಾವೆರ್ ಮೊದಲ ಬಾರಿ ಈ ಸಾಧನೆ ಮಾಡಿದ್ದರು. 2009 ಹಾಗೂ 2016ರ ನಡುವೆ ರೋಜರ್ ಫೆಡರರ್, ರಫೆಲ್ ನಡಾಲ್ ಹಾಗೂ ಜೊಕೊವಿಕ್ ಈ ಕ್ಲಬ್ಬನ್ನು ಸೇರಿದ್ದಾರೆ.