T20 ವಿಶ್ವಕಪ್–2026 | ಭಾರತದ ವಿರುದ್ಧದ ಪಂದ್ಯ ಬಹಿಷ್ಕಾರಕ್ಕೆ ಪಾಕಿಸ್ತಾನ ನಿರ್ಧಾರ
Photo Credit: AP
ಹೊಸದಿಲ್ಲಿ: ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಸರ್ಕಾರ ತನ್ನ ಪುರುಷರ ಕ್ರಿಕೆಟ್ ತಂಡಕ್ಕೆ ಅನುಮತಿ ನೀಡಿದ್ದರೂ, ಫೆಬ್ರವರಿ 15ರಂದು ನಡೆಯಬೇಕಿದ್ದ ಭಾರತದ ವಿರುದ್ಧದ ಲೀಗ್ ಹಂತದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಶ್ರೀಲಂಕಾದ ಕೊಲಂಬೊದಲ್ಲಿ ಗ್ರೂಪ್ ‘ಎ’ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಬೇಕಿತ್ತು. ವೇಳಾಪಟ್ಟಿಯಲ್ಲಿ ಅದು ನಿಗದಿಯಾಗಿತ್ತು. ಆದರೆ ರಾಜಕೀಯ ವೈಮನಸ್ಸಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಪಂದ್ಯಗಳನ್ನು ಆಡಲು ಪಾಕಿಸ್ತಾನ ನಿರಾಕರಿಸಿದ್ದರಿಂದ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪಾಕಿಸ್ತಾನದ ಪಂದ್ಯಗಳನ್ನು ತಟಸ್ಥ ಸ್ಥಳವಾದ ಶ್ರೀಲಂಕಾಕ್ಕೆ ಸ್ಥಳಾಂತರಿಸಿತ್ತು.
ಭದ್ರತಾ ಆತಂಕಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶವೂ ತನ್ನ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಲು ಮನವಿ ಮಾಡಿದ್ದರೂ, ICC ಆ ವಿನಂತಿಯನ್ನು ತಿರಸ್ಕರಿಸಿತು. ನಂತರ ಬಾಂಗ್ಲಾದೇಶ ತಂಡ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದು, ಅದರ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಲಾಯಿತು.
ಬಾಂಗ್ಲಾದೇಶದ ನಿಲುವಿಗೆ ಬೆಂಬಲ ಸೂಚಿಸಿದ್ದ ಪಾಕಿಸ್ತಾನ, ಪಂದ್ಯ ಬಹಿಷ್ಕರಿಸುವ ಸಾಧ್ಯತೆಯನ್ನು ಮುಂಚೆಯೇ ಸೂಚಿಸಿತ್ತು. ಕಳೆದ ವಾರ ನಡೆದ ICC ಮಂಡಳಿಯ ವರ್ಚುವಲ್ ಸಭೆಯಲ್ಲೂ ಇದೇ ನಿಲುವನ್ನು ಪುನರುಚ್ಚರಿಸಿದೆ. ಕಳೆದ ವರ್ಷದ ಚಾಂಪಿಯನ್ಸ್ ಟ್ರೋಫಿ ವೇಳೆ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತದ ಪಂದ್ಯಗಳನ್ನು ಪಾಕಿಸ್ತಾನದಿಂದ ದುಬೈಗೆ ಸ್ಥಳಾಂತರಿಸಿದ್ದ ಘಟನೆಯನ್ನೂ ಪಾಕಿಸ್ತಾನ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.
2008ರಿಂದ ಭಾರತ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2025ರ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲೂ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಕಳೆದ ವರ್ಷ ಕೈಗೊಳ್ಳಲಾದ ಒಪ್ಪಂದದ ಪ್ರಕಾರ, ಭಾರತ ಅಥವಾ ಪಾಕಿಸ್ತಾನ ಆತಿಥ್ಯ ವಹಿಸಿದ ICC ಪಂದ್ಯಾವಳಿಗಳಲ್ಲಿ ಎರಡೂ ತಂಡಗಳು ತಟಸ್ಥ ಸ್ಥಳಗಳಲ್ಲಿ ಆಡಲು ಅವಕಾಶ ನೀಡಬೇಕು ಎಂದು ತೀರ್ಮಾನಿಸಲಾಗಿದೆ.
ಇದಕ್ಕೂ ಮುಂದೆ, ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(IPL) ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾದೇಶದ ಆಟಗಾರ ಮುಸ್ತಾಫಿಝುರ್ ರಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಸೂಚಿಸಿದ್ದ ಬೆಳವಣಿಗೆಯೂ ನಡೆದಿತ್ತು.