ಭಾರತ–ನ್ಯೂಝಿಲ್ಯಾಂಡ್ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ಅಂಪೈರ್ ಕಾರ್ಯನಿರ್ವಹಣೆ!
Photo Credit : PTI
ಹೊಸದಿಲ್ಲಿ, ಜ.14: ಒಂದೆಡೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮುಂದಿನ ತಿಂಗಳು ನಡೆಯಲಿರುವ ಟಿ–20 ವಿಶ್ವಕಪ್‌ಗಾಗಿ ತನ್ನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಿಕೊಡಲು ನಿರಾಕರಿಸುತ್ತಿದ್ದರೆ, ಮತ್ತೊಂದೆಡೆ ಬಾಂಗ್ಲಾದೇಶದ ಅಧಿಕಾರಿಯೊಬ್ಬರು ಭಾರತದ ನೆಲದಲ್ಲಿ ನಡೆಯುತ್ತಿರುವ ಭಾರತ–ನ್ಯೂಝಿಲ್ಯಾಂಡ್ ನಡುವಿನ ಏಕದಿನ ಸರಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಗಳವಾರ ಐಸಿಸಿಯೊಂದಿಗೆ ಮಾತುಕತೆ ನಡೆಸಿದ್ದ ಬಿಸಿಬಿ, ತನ್ನ ತಂಡವನ್ನು ಭಾರತಕ್ಕೆ ಕಳುಹಿಸಿಕೊಡಲು ಮತ್ತೊಮ್ಮೆ ನಿರಾಕರಿಸಿತ್ತು. ಭಾರತದಲ್ಲಿ ಭದ್ರತಾ ಕಳವಳವನ್ನು ಉಲ್ಲೇಖಿಸಿ, ಬಾಂಗ್ಲಾದೇಶದ ವಿಶ್ವಕಪ್ ಗುಂಪು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ವಿನಂತಿಸಿತ್ತು.
ಬಾಂಗ್ಲಾದೇಶದ ಅಂಪೈರ್ ಶರ್ಫುದ್ದೌಲಾ ಶಾಹಿದ್ ಸೈಕತ್ ಈಗ ನಡೆಯುತ್ತಿರುವ ಭಾರತ–ನ್ಯೂಝಿಲ್ಯಾಂಡ್ ನಡುವಿನ ಏಕದಿನ ಸರಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಡೋದರದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಟಿವಿ ಅಂಪೈರ್ ಆಗಿ ಕೆಲಸ ಮಾಡಿದ್ದ ಸೈಕತ್, ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಿವಿ ಹಾಗೂ ಮೂರನೇ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಎರಡು ದೇಶಗಳ ಕ್ರಿಕೆಟ್ ಮಂಡಳಿಗಳ ನಡುವಿನ ಸಂಬಂಧ ಹದಗೆಟ್ಟಿರುವ ಸಂದರ್ಭದಲ್ಲಿಯೇ ಸೈಕತ್ ಅವರ ನಿಲುವು ಅಚ್ಚರಿ ಮೂಡಿಸಿದೆ. ಭಾರತದಲ್ಲಿ ಸೈಕತ್ ಅವರ ಉಪಸ್ಥಿತಿ ಪಂದ್ಯಾಧಿಕಾರಿಗಳ ನೇಮಕದಲ್ಲಿ ಐಸಿಸಿಯ ಸ್ವತಂತ್ರ ಪ್ರಕ್ರಿಯೆಯನ್ನು ಎತ್ತಿ ತೋರಿಸುತ್ತದೆ.
ಸೈಕತ್ 2024ರಿಂದ ಐಸಿಸಿ ಎಲೈಟ್ ಸಮಿತಿಯ ಅಂಪೈರ್ ಆಗಿದ್ದು, 32 ಟೆಸ್ಟ್, 119 ಏಕದಿನ ಹಾಗೂ 75 ಟಿ–20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಅವರು ಬಿಸಿಬಿಯ ಅಂಪೈರ್ ಶಿಕ್ಷಣ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಸೈಕತ್ ಹಾಗೂ ಬಾಂಗ್ಲಾದೇಶದ ಇತರ ಅಧಿಕಾರಿಗಳು ಮುಂಬರುವ ಟಿ–20 ವಿಶ್ವಕಪ್‌ನಲ್ಲೂ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.