RCB ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಡಲಿದೆಯೇ?: ಮುಂದಿನ ವಾರ ಅಂತಿಮ ನಿರ್ಧಾರ
ಚಿನ್ನಸ್ವಾಮಿ ಸ್ಟೇಡಿಯಂ | Photo Credit : PTI
ಬೆಂಗಳೂರು, ಜ.13: ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ತವರು ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವ ಕುರಿತು ಅಂತಿಮ ನಿರ್ಧಾರವನ್ನು ಮುಂದಿನ ವಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಪುಣೆಯ ಎಂಸಿಎ ಕ್ರೀಡಾಂಗಣವನ್ನು RCB ಮರುಪರಿಶೀಲಿಸಿದ್ದಕ್ಕಾಗಿ ಈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಪತ್ರಿಕಾ ಪ್ರಕಟಣೆಯಲ್ಲಿ ಧನ್ಯವಾದ ಅರ್ಪಿಸಿದ ನಂತರ, RCB ತನ್ನ ಪಂದ್ಯಗಳನ್ನು ಗಾರ್ಡನ್ ಸಿಟಿಯಿಂದ ಹೊರಗೆ ಸ್ಥಳಾಂತರಿಸುವ ಬಗ್ಗೆ ವದಂತಿಗಳು ಹೆಚ್ಚಾಗಿದ್ದವು.
2025ರ ಜೂನ್ 4ರಂದು RCB ಪ್ರಶಸ್ತಿ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ನಂತರ ಚಿನ್ನಸ್ವಾಮಿ ಸ್ಟೇಡಿಯಂ ಮುಚ್ಚಲಾಗಿದೆ.
ನಿಯಮಗಳನ್ನು ಪಾಲಿಸದ ಕಾರಣ ಇತ್ತೀಚೆಗೆ ರಾಜ್ಯ ಸರ್ಕಾರವು ವಿಜಯ್ ಹಝಾರೆ ಟ್ರೋಫಿ ಪಂದ್ಯಗಳನ್ನು ನಡೆಸಲು ಅನುಮತಿ ನಿರಾಕರಿಸಿತ್ತು. ಹೀಗಾಗಿ ವಿರಾಟ್ ಕೊಹ್ಲಿ ನಗರದ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ದಿಲ್ಲಿ ಪರವಾಗಿ ಎರಡು ಪಂದ್ಯಗಳನ್ನು ಆಡಿದ್ದರು.
ಕರ್ನಾಟಕ ತಂಡವು ಮಧ್ಯಪ್ರದೇಶ ವಿರುದ್ಧದ ಮುಂಬರುವ ರಣಜಿ ಟ್ರೋಫಿ ಪಂದ್ಯವನ್ನು ಜನವರಿ 22ರಂದು ಆಲೂರು ಮೈದಾನದಲ್ಲಿ ಆಡಲಿದೆ.
‘‘RCBಯೊಂದಿಗೆ ಮಾತುಕತೆ ಮುಂದುವರಿದಿದೆ. ಫ್ರಾಂಚೈಸಿಯ ಪಂದ್ಯಗಳು ಬೆಂಗಳೂರಿನಿಂದ ಹೊರಗೆ ಸ್ಥಳಾಂತರವಾಗುವ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ಮುಂದಿನ ವಾರ ಮಾತ್ರ ಅಧಿಕೃತ ಹೇಳಿಕೆಯನ್ನು ನೀಡಲು ಸಾಧ್ಯ. ರಣಜಿ ಟ್ರೋಫಿ ಪಂದ್ಯಗಳಿಗೆ ಸಂಬಂಧಿಸಿ ಚಿನ್ನಸ್ವಾಮಿ ಸ್ಟೇಡಿಯಂ ಇನ್ನೂ ಸಂಪೂರ್ಣ ಸಜ್ಜಾಗಿಲ್ಲ’’ ಎಂದು ಕೆಎಸ್‌ಸಿಎ ಅಧಿಕೃತ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.