ದಿಲ್ಲಿಯಲ್ಲಿ ತೀವ್ರ ವಾಯು ಮಾಲಿನ್ಯ | ಇಂಡಿಯಾ ಓಪನ್ ಟೂರ್ನಿಯಿಂದ ಹಿಂದೆ ಸರಿದ ವಿಶ್ವದ ನಂ.3ನೇ ಆಟಗಾರ ಆಂಟೊನ್ಸನ್
ಆ್ಯಂಡರ್ಸ್ ಆಂಟೋನ್ಸನ್ | Photo Credit : Instagram/Anders Antonsen
ಹೊಸದಿಲ್ಲಿ, ಜ.14: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ನಡೆಯುತ್ತಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹಿಂದೆ ಸರಿಯುತ್ತಿರುವುದಾಗಿ ವಿಶ್ವದ ನಂ.3ನೇ ಪುರುಷರ ಸಿಂಗಲ್ಸ್ ಆಟಗಾರ ಆ್ಯಂಡರ್ಸ್ ಆಂಟೊನ್ಸನ್ ಬುಧವಾರ ತಿಳಿಸಿದ್ದಾರೆ.
‘‘ಸತತ ಮೂರನೇ ಬಾರಿಯೂ ಇಂಡಿಯಾ ಓಪನ್ ನಿಂದ ನಾನು ಏಕೆ ಹಿಂದೆ ಸರಿದಿದ್ದೇನೆ ಎಂದು ತಿಳಿದುಕೊಳ್ಳಲು ಹಲವರು ಕುತೂಹಲದಿಂದಿದ್ದಾರೆ. ದಿಲ್ಲಿಯಲ್ಲಿ ವಾಯು ಮಾಲಿನ್ಯ ತೀವ್ರವಾಗಿದ್ದು, ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲು ಸೂಕ್ತ ಪ್ರದೇಶವೆಂದು ನಾನು ಭಾವಿಸುವುದಿಲ್ಲ’’ ಎಂದು ಆಂಟೊನ್ಸನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.
ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವನ್ನು ತೋರಿಸುವ ಸ್ಕ್ರೀನ್ ಶಾಟ್ ಅನ್ನು ಆಂಟೊನ್ಸನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ 348 ಎಂದು ದಾಖಲಾಗಿದ್ದು, ಪರಿಸ್ಥಿತಿ ಅಪಾಯಕಾರಿ ಎನ್ನುವುದನ್ನು ಸೂಚಿಸುತ್ತದೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಬಾರಿ ಪದಕ ವಿಜೇತ ಆಂಟೊನ್ಸನ್ ಅವರು ತಮ್ಮ ಈ ನಿರ್ಧಾರಕ್ಕಾಗಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ಗೆ (ಬಿಡಬ್ಲ್ಯುಎಫ್) 5,000 ಅಮೆರಿಕನ್ ಡಾಲರ್ ಗಳ (4.5 ಲಕ್ಷ ರೂ.) ದಂಡ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ.
9,50,000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಹೊಂದಿರುವ ಬಿಡಬ್ಲ್ಯುಎಫ್ ಟೂರ್ನಿಯಲ್ಲಿ ಆಡುವ ಪರಿಸ್ಥಿತಿಯ ಬಗ್ಗೆ ಡೆನ್ಮಾರ್ಕ್ ನ ಆಟಗಾರ್ತಿ ಮಿಯಾ ಬ್ಲಿಚ್‌ಫೆಲ್ಟ್ ಟೀಕೆ ವ್ಯಕ್ತಪಡಿಸಿದ್ದ ಮರುದಿನವೇ ಆಂಟೊನ್ಸನ್ ಈ ಹೆಜ್ಜೆ ಇಟ್ಟಿದ್ದಾರೆ.
ದಿಲ್ಲಿ ನಗರವು ಹೆಚ್ಚಾಗಿ ದಟ್ಟವಾದ ಹೊಗೆಯಿಂದ ಆವೃತವಾಗಿರುತ್ತದೆ. ಇದನ್ನು ವೈದ್ಯರು ಅಪಾಯಕಾರಿ ಎಂದು ಬಣ್ಣಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದ ಕೆ.ಡಿ. ಜಾಧವ್ ಒಳಾಂಗಣ ಕ್ರೀಡಾಂಗಣದಿಂದ ಇಂಡಿಯಾ ಓಪನ್ ಟೂರ್ನಿಯನ್ನು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಬಿಎಐ) ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣವು ಆಗಸ್ಟ್‌ನಲ್ಲಿ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ಆಯೋಜಿಸಲು ಸಜ್ಜಾಗಿದೆ.